ಕರಾವಳಿ

ಡಿಎಆರ್ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಡೆತ್ ನೋಟ್’ನಲ್ಲಿತ್ತು ಆ ಮೂವರ ಹೆಸರು..?

Pinterest LinkedIn Tumblr

ಉಡುಪಿ: ಎರಡು ದಿನಗಳ ಹಿಂದೆ ಆದಿಉಡುಪಿ ಶಾಲೆಯಲ್ಲಿ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಯ ಹೆಡ್‌ಕಾನ್ ಸ್ಟೇಬಲ್ ರಾಜೇಶ್ ಕುಂದರ್(44) ಮೃತಪಟ್ಟ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಮೃತರು ಬರೆದಿಟ್ಟಿದ್ದರೆನ್ನಲಾದ ಡೆತ್‌ನೋಟ್ ಎ.30ರಂದು ಪತ್ತೆಯಾಗಿದೆ.

ಆದಿಉಡುಪಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಉತ್ತರಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯದಲ್ಲಿ ಇರುವಾಗ ಎ.28ರಂದು ರಾತ್ರಿ ಎಎಚ್‌ಸಿ 104ನೇ ರಾಜೇಶ್ ಕುಂದರ್ ಬಳಿಯಿದ್ದ ರೈಫಲ್‌ನಿಂದ ಅಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿರುವುದಾಗಿ ಡಿಎಆರ್ ಕಾನ್‌ಸ್ಟೇಬಲ್ ಗಣೇಶ್ ನೀಡಿದ ಹೇಳಿಕೆಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಮುಗಿದ ಬಳಿಕ ಗಣೇಶ್, ಆದಿ ಉಡುಪಿ ಶಾಲೆಯಲ್ಲಿದ್ದ ತನ್ನ ಬಟ್ಟೆಬರೆಯ ಬ್ಯಾಗ್ ಮತ್ತು ರೈಫಲ್ ನ್ನು ತೆಗೆದುಕೊಂಡು ಡಿಎಆರ್ ಕೇಂದ್ರ ಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಬ್ಯಾಗ್‌ನ್ನು ಕಿಟ್ ಬಾಕ್ಸ್‌ನಲ್ಲಿ ಇರಿಸಿ, ರೈಫಲ್ ನ್ನು ಆರ್ಮರ್‌ರವರಲ್ಲಿ ಡೆಪಾಸಿಟ್ ಮಾಡಿ ವಿಶ್ರಾಂತಿಗೆ ಹೋಗಿದ್ದರು.

ಎ.30ರಂದು ಬೆಳಿಗ್ಗೆ 9.30ಕ್ಕೆ ಗಣೇಶ್, ಡಿಎಆರ್ ಕೇಂದ್ರ ಸ್ಥಾನಕ್ಕೆ ಕರ್ತವ್ಯಕ್ಕೆ ಬಂದು ಕಿಟ್‌ಬಾಕ್ಸ್‌ನಲ್ಲಿದ್ದ ಬ್ಯಾಗ್‌ನಿಂದ ಸಮವಸ್ತ್ರ ಮತ್ತು ಬೆಟ್ ಶೀಟ್‌ನ್ನು ಹೊರತೆಗೆದಾಗ, ಬೆಡ್‌ಶೀಟ್‌ನ ಅಡಿಯಿಂದ ನೋಟ್ ಬುಕ್‌ನ ಒಂದು ಹಾಳೆ ಯಲ್ಲಿ ಬರೆದ ಡೆತ್‌ನೋಟು ಪತ್ತೆಯಾಯಿತೆನ್ನಲಾಗಿದೆ.

ಬ್ಯಾಗ್‌ನಲ್ಲಿ ಪತ್ತೆಯಾದ ಡೆತ್‌ನೋಟ್‌ನ ಕೊನೆಯಲ್ಲಿ ಎಎಚ್‌ಸಿ(ಆರ್ಮ್ ಹೆಡ್ ಕಾನ್‌ಸ್ಟೇಬಲ್)104 ಎಂದು ಬರೆದು ಸಹಿ ಮಾಡಿರುವುದು ಕಂಡು ಬಂದಿದೆ. ಡೆತ್‌ನೋಟ್‌ನಲ್ಲಿ ನನ್ನ ದೇಹ ತ್ಯಾಗಕ್ಕೆ ಡಿಎಆರ್ ಕಾನ್‌ಸ್ಟೇಬಲ್ ಗಳಾದ ಉಮೇಶ್, ಅಶ್ಪಕ್ ಹಾಗೂ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ನಂಜ ನಾಯ್ಕ್ ಕಾರಣ ಎಂಬುದಾಗಿ ಬರೆಯಲಾಗಿದೆ.

ಈ ಮಾಹಿತಿಯನ್ನು ಗಣೇಶ್, ಪೊಲೀಸ್ ಮೇಲಾಧಿಕಾರಿಗಳಿಗೆ ತಿಳಿಸಿ ಡೆತ್ ನೋಟ್‌ನ್ನು ಠಾಣೆಗೆ ಹಾಜರುಪಡಿಸಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಕಲಂ: 306 ಆರ್‌ಡಬ್ಲ್ಯು 34 ಐಪಿಸಿಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.