ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ವರಿಷ್ಠರಿಗೆ ಸಲ್ಲಿಸಲಾಗಿದ್ದು ಇನ್ನು ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು, ಪ್ರಮೋದ್ ಪಕ್ಷ ಸೇರ್ಪಡೆಯಾಗಲು ಯಾವುದೇ ರೀತಿಯ ಹುದ್ದೆಯ ಕಂಡೀಷನ್ ಹಾಕಿಲ್ಲ ಎಂದು ಉಡುಪಿ ಜಿಲ್ಲ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ ಪಕ್ಷದ ಸಿದ್ಧಾಂತವನ್ನು ನಂಬಿ ಬರುವವರಿಗೆ ಪಕ್ಷದ ಗೇಟ್ ಯಾವತ್ತೂ ಮುಚ್ಚಿಲ್ಲ ಆದರೆ ಯಾವುದೇ ಹುದ್ದೆಯ ನಿರೀಕ್ಷೆಯಿಲ್ಲದೆ ಬರುವ ಇಂಗಿತವನ್ನು ಮಾಜಿ ಸಚಿವರು ವ್ಯಕ್ತಪಡಿಸಿದ್ದಾರೆ. ಒಂದು ಹಂತದ ಮಾತುಕತೆ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾ ನಾಯಕರು ಸೇರಿಕೊಂಡು ಮಾಡಿದ್ದು ಅವರನ್ನು ಯಾವಾಗ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವುದರ ಕುರಿತು ರಾಜ್ಯ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ.
ಪ್ರಮೋದ್ ಅವರು ಪಕ್ಷಕ್ಕೆ ಬರುವ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಯಾವುದೇ ಅಸಮಾಧಾನ ಇದ್ದರೆ ಅದಕ್ಕೆ ರಾಜ್ಯ ವರಿಷ್ಠರು ಸೂಕ್ತ ಉತ್ತರ ನೀಡಲಿದ್ದಾರೆ. ಒಬ್ಬ ವ್ಯಕ್ತಿ ಪಕ್ಷಕ್ಕೆ ಬರುವ ಸಮಯದಲ್ಲಿ ವಿರೋಧಗಳು ಸಹಜ ಆದರೆ ಬಳಿಕ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕೆನ್ನುವುದು ಬಿಜೆಪಿ ಪಕ್ಷದ ಸಿದ್ದಾಂತವಾಗಿದೆ ಎಂದರು.
Comments are closed.