ಕುಂದಾಪುರ: ಭಕ್ತರ ಅಭೀಷ್ಟೆಗಳನ್ನು ಈಡೇರಿಸುವ ಮಾತೃ ಹೃದಯಿಯಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನನ್ನ ಸಣ್ಣ ವಯಸ್ಸಿನಿಂದಲೂ ಬರುತ್ತಿದ್ದೇನೆ. ತಾಯಿ ಸನ್ನಿಧಿಗೆ ಬಂದಾಗಲೆಲ್ಲ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಜಗನ್ಮಾತೆಯಾದ ಆಕೆಯ ಇಚ್ಚೆಯಂತೆ ಎಲ್ಲವೂ ನಡೆಯುತ್ತದೆ. ನಾವೆಲ್ಲ ನಿಮಿತ್ತ ಮಾತ್ರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡು ಋತ್ವೀಜರ ಮೂಲಕ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ವತಿಯಿಂದ ಗೌರವ ಸ್ವೀಕಾರ ಪಡೆದುಕೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಕ್ಷೇತ್ರದ ಶೃದ್ಧೆ-ಭಕ್ತಿಗಳು ಭಕ್ತರನ್ನು ಸದಾಕಾಲ ಕಾಪಾಡುತ್ತದೆ. ಕ್ಷೇತ್ರದ ಅರ್ಚಕ ಕುಟುಂಬದವರಾದ ಅಡಿಗ ಕುಟುಂಬಿಕರ ಜೊತೆ ಹಲವಾರು ವರ್ಷಗಳಿಂದ ನಾವು ಸಂಪರ್ಕದಲ್ಲಿ ಇದ್ದೇವೆ. ಅವರು ಮಾಡುವ ಪೂಜೆ ವಿಧಾನಗಳು ಹಾಗೂ ಮೂಕಾಂಬಿಕಾ ಸನ್ನಿಧಾನದಲ್ಲಿ ತೋರುವ ಶೃದ್ಧೆಗಳು ನಮ್ಮನ್ನು ಕಾಯುತ್ತಿದೆ ಎನ್ನುವ ನಂಬಿಕೆ ಇದೆ. ಕೆಲವೊಮ್ಮೆ ಕ್ಷೇತ್ರಕ್ಕೆ ಬರಲಾಗದೆ ಇದ್ದಾಗಲೂ, ಅರ್ಚಕರಾದ ನಾರ್ಸಿ ನರಸಿಂಹ ಅಡಿಗರ ಕುಟುಂಬದವರನ್ನು ಸಂಪರ್ಕಿಸಿ ಹೇಳಿದಾಗ, ಅವರೇ ಮುತುವರ್ಜಿ ವಹಿಸಿ ಪೂಜೆ ಮಾಡಿ, ಪ್ರಸಾದ ಕಳುಹಿಸಿದ ಪ್ರಸಂಗಗಳು ಇದೆ. ನಾನು ಇಂದು ಈ ಸ್ಥಾನದಲ್ಲಿ ಇದ್ದೇನೆ ಎಂದರೇ ಅದಕ್ಕೆ ತಾಯಿ ಮೂಕಾಂಬಿಕೆಯ ಆಶೀರ್ವಾದವೂ ಕಾರಣವಾಗಿದೆ ಎಂದು ಹೇಳಿದರು.
ಋತ್ವೀಜರಾದ ನಾರ್ಸಿ ನರಸಿಂಹ ಅಡಿಗ ಹಾಗೂ ಎನ್.ಪರಮೇಶ್ವರ ಅಡಿಗ ಅವರ ನೇತ್ರತ್ವದಲ್ಲಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಮೂಕಾಂಬಿಕೆ, ಆದಿ ಶಂಕರಾಚಾರ್ಯ ಹಾಗೂ ವೀರಭದ್ರ ಸನ್ನಿಧಾನಗಳಿಗೆ ಭೇಟಿ ನೀಡಿ ದರ್ಶನ ಪಡೆದು ಅವರು ವಿಶೇಷ ಪೂಜೆ ಸಲ್ಲಿಸಿದರು.
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ನಿರ್ಮಲಾ ಸೀತಾರಾಮನ್ ಅವರ ಸಹೋದರ ಸಂಬಂಧಿ ಲಕ್ಷ್ಮೀನಾರಾಯಣ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್ , ಮಾಜಿ ಅಧ್ಯಕ್ಷ ಹರೀಶ್‌ಕುಮಾರ ಶೆಟ್ಟಿ, ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಗೋಪಾಲಕೃಷ್ಣ ನಾಡಾ, ಜಯಾನಂದ ಹೋಬಳಿದಾರ್, ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ಹೈದರ್‌ಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು, ರಾಜ್ಯ ಬಿಜೆಪಿ ಕಾರ್ಯದರ್ಶಿ ನಯನಾ ಗಣೇಶ್, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಕೆ.ಶ್ರೀಕಾಂತ್, ತಹಶೀಲ್ದಾರ್ ಶೋಭಾ ಲಕ್ಷ್ಮೀ, ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮ್ ಕೃಷ್ಣ ಭಟ್ ಇದ್ದರು.
Comments are closed.