ಕರಾವಳಿ

ಜಾಗದ ವಿಚಾರದಲ್ಲಿ ತಕರಾರು: ಗಂಗೊಳ್ಳಿ ಪೊಲೀಸರ ವರ್ತನೆ ವಿರುದ್ಧ ಡಿವೈಎಸ್ಪಿಗೆ ದೂರು ನೀಡಿದ ಕಾಂಗ್ರೆಸ್

Pinterest LinkedIn Tumblr

ಕುಂದಾಪುರ: ಜಾಗದ ತಕರಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳ ವಿರುದ್ಧ ದೂರು ಹಾಗೂ ಪ್ರತಿ ದೂರಿನ ಹಿನ್ನೆಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಗಂಗೊಳ್ಳಿ ಪೊಲೀಸರು ಬಿಜೆಪಿಯವರ ರಾಜಕೀಯ ಒತ್ತಡದಿಂದ ಕಾನೂನು ಬಾಹಿರವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ಕಾಂಗ್ರೆಸ್ ನಿಯೋಗ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಕರಣದ ಸಾರಾಂಶ…
ಗುಜ್ಜಾಡಿ ಗ್ರಾಮದ ಕೊಡಪಾಡಿಯ ತನ್ನ ಮನೆಯಲ್ಲಿದ್ದಾಗ ಸೀತಾರಾಮ ಗಾಣಿಗ, ರಾಮಚಂದ್ರ ಗಾಣಿಗ ಹಾಗೂ ವಿಜಯ ಗಾಣಿಗ ಅವರು ತನಗೆ ಹಾಗೂ ಅತ್ತೆ ತುಂಗಾ ಅವರನ್ನು ದೂಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಜಾಹ್ನವಿ ಡಿ. ಗಾಣಿಗ ದೂರು ನೀಡಿದ್ದರು. ತಮ್ಮ ಮನೆಗೆ ಹೋಗುವ ದಾರಿಯಲ್ಲಿ ಇಟ್ಟಿದ್ದ ಕಲ್ಲನ್ನು ತೆಗೆಯುತ್ತಿರುವಾಗ ಅಲ್ಲಿಗೆ ಬಂದ ನಾಗಮ್ಮ(ತುಂಗ), ಭಾಸ್ಕರ, ವಿಜಯ, ದೇವಕಿ, ಜಾಹ್ನವಿ, ಹಾಗೂ ಇತರರು ಜೀವ ಬೆದರಿಕೆ ಹಾಕಿರುವುದಾಗಿ ಕೊಡಪಾಡಿಯ ತುಂಗ ಗಾಣಿಗ ಅವರು ದೂರು ನೀಡಿದ್ದರು.

ಡಿವೈಎಸ್‌ಪಿಗೆ ಮನವಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಒತ್ತಡದಿಂದಾಗಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯ ಸೀತಾರಾಮ ಗಾಣಿಗ ಅವರ ಮೇಲೆ ಸುಳ್ಳು ಗಂಭೀರ ಪ್ರಕರಣ ದಾಖಲಿಸಿ, ಬಂಧಿಸಿದಲ್ಲದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕೋಳ ಹಾಕುವ ತನಕ ಹೋಗಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಪ್ರಕರಣದ ಕುರಿತು ಮಾತನಾಡಲು ಬಂದ ಪ್ರಮುಖರ ಮೇಲೂ ಸಹ ವೈಯಕ್ತಿಕ ಹಿತಾಸಕ್ತಿಯಿಂದ ರೇಗಾಡಿದ್ದಾರೆಂದು ಆರೋಪಿಸಲಾಗಿದೆ. ಮಾತ್ರವಲ್ಲದೆ ಎದುರು ತಾವು ನೀಡಿದ ದೂರಿನ ಪ್ರಕರಣದ ಆರೋಪಿಗಳನ್ನು ರಾಜಕೀಯ ಒತ್ತಡದಿಂದ ಬಂಧಿಸದೇ ಗಂಗೊಳ್ಳಿ ಪೊಲೀಸರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಿಕೊಡದಿದ್ದಲ್ಲಿ, ಠಾಣೆಯೆದುರೇ ಪ್ರತಿಭಟನೆ ನಡೆಸಲಾಗುವುದು ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಕೆ. ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಮನವಿ ಆಲಿಸಿದ ಡಿವೈಎಸ್ಪಿ ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಗುಜ್ಜಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ, ಉಪಾಧ್ಯಕ್ಷ ರಾಜು ಎನ್. ಪೂಜಾರಿ, ಸದಸ್ಯರಾದ ಭಾರತಿ, ಲೋಲಾಕ್ಷಿ ಪಂಡಿತ್, ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ,‌ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ವಿಕಾಸ್ ಹೆಗ್ಡೆ, ಸದಾಶಿವ ಶೆಟ್ಟಿ, ಶೇಖರ್ ಬಳೆಗಾರ್, ರವಿ ಪೂಜಾರಿ, ಚಂದ್ರಶೇಖರ್ ಅರಾಟೆ, ಜಗನ್ನಾಥ್ ಬಿಲ್ಲವ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ಕಾಳಿಂಗ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹಾಲಿಂಗ ಪೂಜಾರಿ ಮೊದಲಾದವರಿದ್ದರು.

ಮನವಿಯಲ್ಲಿ ಏನಿದೆ..?
ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಗಾಣಿಗ ಎನ್ನುವರ ದಾರಿಗೆ ಸಂಬಂಧಿಸಿದ ಸಿವಿಲ್ ಪ್ರಕರಣದಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದ್ದು, ಬಿ.ಜೆ.ಪಿ ಪಕ್ಷದವರ ಒತ್ತಡದ ಮೇರೆಗೆ ಕಾಂಗ್ರೆಸ್ ಪಕ್ಷ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಗಾಣಿಗ ಮತ್ತು ಅವರ ಮನೆಯವರ ಮೇಲೆ ಸುಳ್ಳು ಸುಳ್ಳು ಗಂಭೀರ ಪ್ರಕರಣ ದಾಖಲಿಸಿ ಇವರು ನೀಡಿದ ದೂರಿನ ಮೇಲೆ ಸಾದಾರಣ ಪ್ರಕರಣ ದಾಖಲಿಸಿ ಅನಂತರ ಗ್ರಾಪಂ ಸದಸ್ಯರನ್ನು ಬಂದಿಸಿ ಠಾಣೆಗೆ ಕರೆತಂದು ಬಹಳಷ್ಟು ಕೆಟ್ಟದಾಗಿ ನಡೆಸಿಕೊಂಡು ಇದೊಂದು ಸಿವಿಲ್ ಪ್ರಕರಣ ಸಂಧಾನ ಮಾಡಲೆಂದು ಊರಿನ ಪ್ರಮುಖರು ಹೇಳಿದರು ಸಹ ಗಂಗೊಳ್ಳಿ ಪೊಲೀಸ್‌ರವರು ವೈಯಕ್ತಿಕ ಹಿತಾಸಕ್ತಿ ಹೊಂದಿ ಗ್ರಾಮ ಪಂಚಾಯತ್ ಸದಸ್ಯರನ್ನು ನ್ಯಾಯಾಧಿಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇವರು ತಮಗೆ ಹಲ್ಲೆ ಮಾಡಿದ ಎದ್ರುದಾರರನ್ನು ಬಂಧಿಸದೇ ರಾಜಕೀಯ ಒತ್ತಡದಿಂದ ಕಾನೂನು ಬಾಹಿರವಾಗಿ ಕ್ರಮಕೈಗೊಂಡಿರುತ್ತಾರೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಒದಗಿಸಿಕೊಡದಿದ್ದಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಗಂಗೊಳ್ಳಿ ಠಾಣೆ ಎದುರು ಪ್ರತಿಭಟನೆ ನ್ಯಾಯ ನಡೆಸಲಾಗುವುದು ಎಂದು‌ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೋಳ ಹಾಕಲು ಹೊರಟ್ಟಿದ್ದರು..!
ಸಿವಿಲ್ ಕೇಸಿನಲ್ಲಿ ಗ್ರಾ.ಪಂ‌ ಸದಸ್ಯರೊಬ್ಬರನ್ನು ಬಂಧಿಸಲಾಗಿದೆ. ಗಂಗೊಳ್ಳಿ ಠಾಣಾಧಿಕಾರಿ, ಕೆಲ ಸಿಬ್ಬಂದಿ ಯಾವುದೋ ವೈಯಕ್ತಿಕ ಹಿತಾಸಕ್ತಿಯಿಂದ ಉಡಾಫೆಯಾಗಿ ವರ್ತಿಸಿದ್ದಾರೆ. ಕೋಳ ಹಾಕಲು ಕೂಡ ಪೊಲೀಸರು ಹೊರಟಿದ್ದರು. ಆದರೆ ಎದ್ರಿದಾರ ಆರೋಪಿಗಳನ್ನು ಬಂಧಿಸಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ಹಿಟ್ಲರ್ ವರ್ತನೆಯೋ ತಿಳಿಯುವುದಿಲ್ಲ.
– ರಾಜು ಎನ್. ಪೂಜಾರಿ (ಗುಜ್ಜಾಡಿ ಗ್ರಾ.ಪಂ ಉಪಾಧ್ಯಕ್ಷ)

ಜಾಗದ ತಕರಾರಿನಲ್ಲಿ ಇಬ್ಬರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿ ಪ್ರಕರಣ ದಾಖಲು ಮಾಡಿದ್ದಾರೆ. ಗಂಗೊಳ್ಳಿ ಠಾಣಾಧಿಕಾರಿ, ಸಿಬ್ಬಂದಿಗಳು ಕಾನೂನು ರಕ್ಷಣೆ ಮಾಡುವುದು ಬಿಟ್ಟು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಸಿವಿಲ್ ಪ್ರಕರಣದಲ್ಲಿ ಗ್ರಾ.ಪಂ ಸದಸ್ಯ ಸೀತಾರಾಮ ಗಾಣಿಗ ಅವರನ್ನು ಕ್ರಿಮಿನಲ್ ಅಪರಾಧಿಯಂತೆ ಕೋಳ ಹಾಕಿ ಕರೆದೊಯ್ಯುವಂತೆ ನಡೆಸಿಕೊಳ್ಳಲಾಗಿದೆ. ಕಾಯ್ದೆ, ಕಾರ್ಯವ್ಯಾಪ್ತಿ ಮೀರಿ ಪೊಲೀಸ್ ಇಲಾಖೆ ನಡೆದುಕೊಳ್ಳುತ್ತಿದೆ. ಇದೆಲ್ಲದರ ಹಿಂದೆ ಬಿಜೆಪಿ ಷಡ್ಯಂತ್ರವಿದೆ. ಇದೆಲ್ಲಾ ಬಲಪ್ರಯೋಗದ ವಿರುದ್ಧ ಹೋರಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ.
– ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು (ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ)

Comments are closed.