ಕರಾವಳಿ

ಶಿಲ್ಪಾ ದೇವಾಡಿಗ ಸೂಸೈಡ್ ಕೇಸಿನಲ್ಲಿ ನಾಲ್ವರ‌‌‌ ಬಂಧನ; 7 ದಿನ ಪೊಲೀಸ್ ಕಸ್ಟಡಿಗೆ ಅಜೀಝ್, ಉಳಿದ ಮೂವರಿಗೆ 14 ದಿನ ನ್ಯಾಯಾಂಗ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ 25 ವರ್ಷದ ಯುವತಿ ಶಿಲ್ಪಾ ದೇವಾಡಿಗ ಎನ್ನುವಾಕೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು‌‌ ಕುಂದಾಪುರ ಡಿವೈಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ‌ಪೊಲೀಸರ ತಂಡ ಬಂಧಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಡಿಯಲ್ಲಿ ಅಜೀಝ್‌ (32) ಹಾಗೂ ಈತನಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಸಹೋದರರಾದ ರಹೀಮ್ (34), ಅಬ್ದುಲ್ ಖಾದರ್ (45) ಕಾಸರಗೋಡಿನ ರಶೀದ್ (25) ಎನ್ನುವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ‌ ಹಾಜರುಪಡಿಸಿದ್ದು ಪ್ರಕರಣದ ಪ್ರಮುಖ ಆರೋಪಿ ಅಜೀಝ್ ಗೆ ಜೂ.6 ತನಕ ಪೊಲೀಸ್ ಕಸ್ಟಡಿ, ಹಾಗೂ ಇನ್ನುಳಿದ ಬಂಧಿತ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ ಎನ್ನಲಾಗಿದೆ.

ಘಟನೆ ಹಿನ್ನೆಲೆ:
ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸದ ಬಳಿಕ ಶಿಲ್ಪಾ‌ ದೇವಾಡಿಗ ತಲ್ಲೂರಿನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ವಾರ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಶಿಲ್ಪಾ ಸಾವನ್ನಪ್ಪಿದ್ದಳು. ಆಕೆ ಟ್ಯುಟೋರಿಯಲ್ ಹೋಗುವ ಸಮಯದಲ್ಲೇ ಅಜೀಝ್ ಶಿಲ್ಪಾ ಸ್ನೇಹ ಬೆಳೆಸಿಕೊಂಡಿದ್ದು ಪ್ರೇಮದ ನಾಟಕವಾಡಿದ್ದ ಅಜೀಝ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ, ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಎನ್ನುವ ಆರೋಪ‌ ಆಕೆ ಕುಟುಂಬಿಕರದ್ದು. ಮತಾಂತರವಾಗಿ ಮದುವೆ ಮಾಡುಕೊಳ್ಳುವಂತೆ ಶಿಲ್ಪಾಗೆ ಒತ್ತಾಯ ಮಾಡಿದ್ದಲ್ಲದೇ ನಿರಂತರ ಬೆದರಿಕೆ ಹಾಕಿದ್ದ ಎನ್ನುವ ಆರೋಪ ಹಿಂದೂ ಪರ ಸಂಘಟನೆಗಳದ್ದು.

ಶಿಲ್ಪಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಜೀಝ್ ಹಾಗೂ ಆತನ ಪತ್ನಿ ಸಲ್ಮಾ ವಿರುದ್ದ ಮೃತಳ ಸಹೋದರ ನೀಡಿದ ದೂರಿನಂತೆ ಆತ್ಮಹತ್ಯೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿತ್ತು. ಆದರೆ ಇದೀಗಾ ಪ್ರಮುಖ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ ಮೂವರು ಆರೋಪಿಗಳ ಸಹಿತ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

Comments are closed.