ಕರಾವಳಿ

ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ; ಆರೋಪಿ ಗಣೇಶ್ ಶೆಟ್ಟಿ ಮೊಳಹಳ್ಳಿ ಜಾಮೀನು ಅರ್ಜಿ ತಿರಸ್ಕರಿಸಿದ ಕುಂದಾಪುರ ನ್ಯಾಯಾಲಯ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಎಂದು ಕರೆಸಿಕೊಂಡಿದ್ದ ಗೋಪಾಲಕೃಷ್ಣ ರಾವ್ (79) ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತ ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನು ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಇದು ಬಹುಕೋಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ಅದಲ್ಲದೆ ಕಟ್ಟೆ ಭೋಜಣ್ಣ ಅವರು ಆರೋಪಿ ಗಣೇಶ್ ಶೆಟ್ಟಿ ಮನೆಯಲ್ಲಿಯೇ ಪಿಸ್ತೂಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾತ್ರವಲ್ಲದೆ ಪೊಲೀಸ್ ಠಾಣೆಯ ಎಸ್.ಎಚ್.ಒ ಅವರನ್ನು ಪ್ರಸ್ತಾಪಿಸಿ ಡೆತ್‌ನೋಟ್‌ ಬರೆದಿರುವುದರಿಂದ ಆರೋಪಿಗೆ ಜಾಮೀನು ನೀಡಬಾರದು ಎನ್ನುವುದಾಗಿ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ‌ ಎಂದು ತಿಳಿದುಬಂದಿದೆ.

ಪ್ರಾಸಿಕ್ಯೂಶನ್ ಮಂಡಿಸಿದ ವಾದವನ್ನು ಪುರಸ್ಕರಿಸಿದ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ| ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರು ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಕಟ್ಟೆ ಭೋಜಣ್ಣ ಅವರು ಮೇ 26 ರಂದು ಬೆಳಗ್ಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ತನ್ನದೇ ಪಿಸ್ತೂಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋಜಣ್ಣ ಡೆತ್ ನೋಟ್ ಬರೆದಿಟ್ಟಿದ್ದರೆನ್ನಾದ ಹಿನ್ನಲೆ ಉದ್ಯಮಿ ಗಣೇಶ ಶೆಟ್ಟಿ ಮೊಳಹಳ್ಳಿ‌‌ ಹಾಗೂ ಎಚ್. ಇಸ್ಮಾಯಿಲ್ ವಿರುದ್ಧ ಆತ್ಮಹತ್ಯೆ ಪ್ರಚೋದನೆ ( ಐಪಿಸಿ ಕಲಂ 306) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನೋರ್ವ ಆರೋಪಿಯ ಜಾಮೀನು ಅರ್ಜಿ ವಿಚಾರಣೆ..
ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಎಚ್. ಇಸ್ಮಾಯಿಲ್ ತಲೆಮರೆಸಿಕೊಂಡಿದ್ದು ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮೂಲಕ ನ್ಯಾಯಾಲಯಕ್ಕೆ ನಿರಿಕ್ಷಣಾ ಜಾಮೀನು ಅರ್ಜಿ‌ ಸಲ್ಲಿಸಿದ್ದು ಜಾಮೀನು ಕೋರಿ ಆರೋಪಿ ಪರ ವಕೀಲರು ವಾದ ಮಂಡಿಸಿದ್ದಾರೆ‌ಂದು ತಿಳಿದುಬಂದಿದೆ.

Comments are closed.