(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಗಂಗೊಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿದ್ದು ಶ್ವಾನಗಳಿಗೆ ವಿಷವಿಕ್ಕಿ ಕೊಲ್ಲಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಳೆದ ತಿಂಗಳಿನಿಂದ ಶ್ವಾನಗಳು ನಿಗೂಢವಾಗಿ ಸಾವನ್ನಪ್ಪುತ್ತಿದೆ. ಮೂಲಗಳ ಪ್ರಕಾರ ಈವರೆಗೂ 20ಕ್ಕೂ ಅಧಿಕ ಶ್ವಾನಗಳ ಕಳೇಬರ ಪತ್ತೆಯಾಗಿದ್ದು ಶುಕ್ರವಾರವೂ ಒಂದು ಕಳೇಬರ ಸಾರ್ವಜನಿಕರಿಗೆ ಪತ್ತೆಯಾಗಿದೆ.
ನಿರಂತರವಾಗಿ ಶ್ವಾನಗಳು ಸಾಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಗಂಗೊಳ್ಳಿ ದೊಡ್ಡಹಿತ್ಲು ಬಂದರ್ ರಸ್ತೆ ನಿವಾಸಿ ನವೀನ್ ಗಂಗೊಳ್ಳಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ‘ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದ ಸಾಕಷ್ಟು ನಾಯಿಗಳು ಸಾವನ್ನಪ್ಪುತ್ತಿದ್ದು, ಜೂ.7ರಂದು ಒಂದೇ ದಿನ 5 ನಾಯಿಗಳು ಸಾವನ್ನಪ್ಪಿದೆ. ಆರೋಗ್ಯವಂತಾಗಿರುವ ನಾಯಿಗಳು ನಿತ್ಯ ನಿರಂತರವಾಗಿ ಸಾವನ್ನಪ್ಪುತ್ತಿರುವುದು ಗಮನಿಸಿದರೆ, ಬೀದಿ ಬದಿಯ ನಾಯಿಗಳನ್ನು ಯಾರೋ ಒಂದಷ್ಟು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸಾಯಿಸಲೆಂದೇ ವಿಷವನ್ನು ಹಾಕಿರುವ ಬಗ್ಗೆ ಅನುಮಾನ ಮೂಡುತ್ತಿದ್ದು, ಮೂಕ ಜೀವಿಗಳನ್ನು ಸಾಯಿಸುತ್ತಿರುವವರ ವಿರುದ್ಧ ಪಿಸಿಎ ಆಕ್ಟ್ ಸೆಕ್ಷನ್ 17, ಐಪಿಸಿ ಸೆಕ್ಷನ್ 428,429 ಮತ್ತು ಇನ್ನಿತರ ಕಠಿಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಂಗೊಳ್ಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Comments are closed.