(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಮುಂಬೈಯಿಂದ ಮಂಗಳೂರಿನಲ್ಲಿ ಮಾರಾಟ ಮಾಡುವುದಕ್ಕೆ ಖಾಸಗಿ ಬಸ್‌ನಲ್ಲಿ ತರುತಿದ್ದ ವೇಳೆ ಬೈಂದೂರಿನ ಶಿರೂರು ಸಮೀಪ ಜೂ.16ರಂದು ಬೆಳಗಿನ ಉಪಾಹಾರಕ್ಕೆಂದು ಬಸ್ ನಿಲ್ಲಿಸಿದ್ದಾಗ 466.960 ಗ್ರಾಂ ತೂಕದ ಅಂದಾಜು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದ ಘಟನೆ ನಡೆದಿತ್ತು. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ಪೊಲೀಸರ ತಂಡ ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದು, ಆರೋಪಿಗಳಿಂದ ಸಂಪೂರ್ಣ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳ ಜಾಡು ಹಿಡಿದು ಮಹಾರಾಷ್ಟ್ರಕ್ಕೆ ತೆರಳಿ ಜೂ.19ರಂದು ಮಹಾರಾಷ್ಟ್ರದ ದುಲೆ ಜಿಲ್ಲೆಯ ಸೋನ್‌ಗಿರ್ ಟೋಲ್‌ಗೇಟ್‌ನಲ್ಲಿ ಗಂಗೊಳ್ಳಿ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್‌ಐ ವಿನಯ ಎಂ.ಕೊರ್ಲಹಳ್ಳಿ ಅವರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಒಟ್ಟು 18 ಲಕ್ಷರೂ.ಮೌಲ್ಯದ 466.960 ಗ್ರಾಂ ಚಿನ್ನಾಭರಣ ಅಲ್ಲದೇ ಅವರು ಬಳಸಿದ್ದ ಎಂಟು ಲಕ್ಷ ರೂ. ಮೌಲ್ಯದ ಬ್ರೀಜಾ ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಮೂಲತ: ಮಧ್ಯಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶ ಧಾರ್ ಜಿಲ್ಲೆ ಧರ್ಮಪುರಿ ತಾಲೂಕಿನ ಸಿಂಧಿ ಮೊಹಲ್ಲಾದ ಅಲಿಖಾನ್ (31), ಸಿಂಧಿ ಮೊಹಲ್ಲಾದವರೇ ಆದ ಅಮ್ಮದ್ ಖಾನ್ (33), ಧಾರ್ ಜಿಲ್ಲೆ ಮನವೂರು ತಾಲೂಕು ಖೇರ್ವಜಾಗೀರ್ ಗ್ರಾಮದ ಇಕ್ರಾರ್ ಖಾನ್ (30) ಹಾಗೂ ಮರವೂರು ತಾಲೂಕು ಬ್ರಾಹ್ಮರಿ ಗ್ರಾಮದ ಗೋಪಾಲ್ ಅಮ್ಲಾವಾರ್ (35) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ: ಮುಂಬೈ ನಿವಾಸಿ ಈಶ್ವರ ದಾಲಿಚಂದ್ ಅವರು ಚಿನ್ನದ ವ್ಯಾಪಾರಿಯಾಗಿದ್ದು, ಮುಂಬೈಯಲ್ಲಿ ಚಿನ್ನ ಖರೀದಿಸಿ ಮಂಗಳೂರು, ಹೈದರಾಬಾದ್ ಮುಂತಾದ ಕಡೆಗಳಲ್ಲಿ ವಿವಿಧ ಚಿನ್ನಾಭರಣ ಅಂಗಡಿಗಳಿಗೆ ಅವುಗಳನ್ನು ಮಾರಾಟ ಮಾಡುತಿದ್ದರು. ಜೂ.೧೪ರಂದು ಅವರು ಮುಂಬೈಯಿಂದ ಮಂಗಳೂರಿಗೆ ಚಿನ್ನ ಮಾರಾಟಕ್ಕಾಗಿ 18 ಲಕ್ಷರೂ.ಮೌಲ್ಯದ 466.960 ಗ್ರಾಂ ಚಿನ್ನವನ್ನು ಸೂಟ್‌ಕೇಸ್ ಒಂದರಲ್ಲಿ ಹಾಕಿ ಭದ್ರಪಡಿಸಿಕೊಂಡು ಖಾಸಗಿ ಬಸ್‌ನಲ್ಲಿ ಮಂಗಳೂರಿಗೆ ಬರುತಿದ್ದಾಗ ಜೂ.16ರ ಮುಂಜಾನೆ ಶಿರೂರು ಬಳಿ ಬೆಳಗಿನ ಉಪಹಾರಕ್ಕಾಗಿ 7.15ಕ್ಕೆ ಬಸ್ ನಿಲ್ಲಿಸಿದ್ದ ವೇಳೆ ಘಟನೆ ನಡೆದಿದೆ.
ಪ್ರಯಾಣಿಕರೆಲ್ಲರೂ ತಿಂಡಿ ತಿನ್ನಲು ಇಳಿದಿದ್ದು, ಈ ವೇಳೆ ಬಸ್ಸಿನಲ್ಲಿ ಯಾರೂ ಇಲ್ಲದ ಸಮಯ ನೋಡಿ ಅಪರಿಚಿತರು ಕಾರಿನಲ್ಲಿ ಬಂದು ಸೂಟ್‌ಕೇಸ್‌ನ್ನು ತೆಗೆದುಕೊಂಡು ಹೋಗಿ ಬಸ್‌ನ ಹಿಂಭಾಗದಲ್ಲಿ ಸೂಟ್‌ಕೇಸ್‌ನ್ನು ಒಡೆದು ಚಿನ್ನವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಈಶ್ವರ ದಾಲಿಚಂದ್ ಅವರು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ಧಲಿಂಗಪ್ಪ ಹಾಗೂ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. ಇವರ ಸೂಚನೆಯಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ತನಿಖೆ ಕೈಗೊಂಡು ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸ ಲಾಗಿದೆ.
ಗಂಗೊಳ್ಳಿ ಪಿಎಸ್‌ಐ ವಿನಯ ಎಂ.ಕೊರ್ಲಹಳ್ಳಿ ಅವರೊಂದಿಗೆ ಕಾರ್ಯಾಚರಣೆಯಲ್ಲಿ ಬೈಂದೂರು ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್‌ಐ ಪವನ ನಾಯಕ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಸುಜಿತ್, ಪ್ರಿನ್ಸ್, ಶ್ರೀನಿವಾಸ, ರಾಘವೇಂದ್ರ ಹಾಗೂ ನಾಗೇಶ್ ಗೌಡ ಭಾಗವಹಿಸಿದ್ದರು.
Comments are closed.