(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ವಸ್ರೆ ಎಂಬಲ್ಲಿ ಸರ್ವೆ ನಂಬ್ರ 170 ರಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ (ಎಸ್.ಎಲ್.ಆರ್.ಎಂ) ನಿರ್ಮಿಸಬಾರದು ಎಂದು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದರು. ಉದ್ದೇಶಿತ ಪ್ರದೇಶಕ್ಕೆ ಕಾಮಗಾರಿಗಾಗಿ ಬಂದ ಜೆಸಿಬಿ ತಡೆದು ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದರು.
ಶನಿವಾರ ಮಧ್ಯಾಹ್ನದ ವೇಳೆ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಪ್ರತಿಭಟನಾಕಾರರನ್ನು ಮನವೊಲಿಸಿ ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರಿದರೂ ಕೂಡ ಸಾರ್ವಜನಿಕರು ಇದಕ್ಕೆ ಕ್ಯಾರೇ ಅನ್ನದೇ ಜೆಸಿಬಿಗೆ ಅಡ್ಡವಾಗಿ ನಿಂತರು.
ಏನಿದು ಸಮಸ್ಯೆ: ತಗ್ಗರ್ಸೆ ಗ್ರಾಮದ ನಿರ್ಮಿಸಲು ಉದ್ದೇಶಿಸಿದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಪ್ರದೇಶದಲ್ಲಿ ವಾಸದ ಮನೆ, ಶಾಲೆ, ಧಾರ್ಮಿಕ ಕೇಂದ್ರ, ಹೊಳೆ, ಅರಣ್ಯ ಪ್ರದೇಶವಾಗಿದ್ದು ಈ ಸ್ಥಳದಲ್ಲಿ ಘಟಕ ನಿರ್ಮಾಣ ಮಾಡುವುದು ಸೂಕ್ತವಲ್ಲ. ಈ ಸ್ಥಳದ 100ಮೀಟರ್ ಸುತ್ತಳತೆಯಲ್ಲಿ ಮನೆಗಳಿದ್ದು, ಇಲ್ಲಿನ ಜನರಿಗೆ ತ್ಯಾಜ್ಯ ನಿರ್ವಹಣಾ ಘಟಕ ಮಾಡಿದಲ್ಲಿ ವಾಸನೆ, ಆರೋಗ್ಯ ಸಮಸ್ಯೆ, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಅಲ್ಲದೆ ಈ ಸ್ಥಳಕ್ಕೆ ಹೊಂದಿಕೊಂಡಿರುವ ಹೊಳೆ ನೀರು ಕಲುಷಿತಗೊಳ್ಳಲಿದೆ. ಇನ್ನು ಈ ಸ್ಥಳದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಮರಗಳಿದ್ದು ಅರಣ್ಯ ನಾಶವಾಗುತ್ತದೆ. ಸುತ್ತಲೂ ಕೃಷಿ ಭೂಮಿಯಿದ್ದು ಘನ ಮತ್ತು ದ್ರವ ತ್ಯಾಜ್ಯಗಳು ಭೂಮಿಗೆ ಸೇರಿ ಕೀಟಭಾದೆಗಳು ಉಂಟಾಗುವುದರಿಂದ ಬೆಳೆ ಹಾನಿಯಾಗಲಿದೆ ಎಂದು ಆರೋಪಿಸಲಾಗಿದೆ.
ಇನ್ನು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಸಮೀಪದ ವಾಸಿಗಳು ಆಕ್ಷೇಪ ಸಲ್ಲಿಸಿದರೂ ಕೂಡ ಈ ಬಗ್ಗೆ ಯಾವುದೇ ತನಿಖೆ ನಡೆಸದೆ, ಪರಿಶೀಲನೆಯನ್ನು ಏಕಪಕ್ಷೀಯವಾಗಿ ಮಾಡಿ ನಾಗರಿಕರ ಆಕ್ಷೇಪಣೆಯನ್ನು ತಿರಸ್ಕರಿಸಿರುವುದು ಕಾನೂನು ವಿರುದ್ಧವಾಗಿದೆ. ತಜ್ಞರ ಸಮಿತಿ ರಚಿಸಿ ವರದಿಯನ್ನು ಪಡೆದಿಲ್ಲ. ಬೈಂದೂರು ಪಟ್ಟಣ ಪಂಚಾಯತ್ ಸ್ಥಾಪನೆಗೊಂಡು ಚುನಾವಣೆಯಾಗಿಲ್ಲ, ಚುನಾಯಿತ ಪ್ರತಿನಿಧಿಗಳು ಇಲ್ಲದಿರುವಾಗ ಏಕಾಏಕಿಯಾಗಿ ಜನನಿಬೀಡ ಪ್ರದೇಶದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕ ನಿರ್ಮಾಣ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಿಎಂ, ಸಿಎಂಗೂ ಮನವಿ..!
ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನವದೆಹಲಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಸಹಿತ ಸಚಿವ, ಸಂಸದರಾದಿಯಾಗಿ, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಕೂಡ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
ಪ್ರತಿಭಟನೆಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಗ್ಗರ್ಸೆ ಗ್ರಾಮಪಂಚಾಯತ್ ಮಾಜಿ ಸದಸ್ಯ ಗೋಪಾಲ ಪೂಜಾರಿ, ಸ್ಥಳೀಯರಾದ ಅಕ್ಷಯ್ ತಗ್ಗರ್ಸೆ, ಗುಲಾಬಿ, ವೀರಭದ್ರ ಗಾಣಿಗ, ಸರ್ವೇಶ್ವರಿ, ಪಾರ್ವತಿ, ರತ್ನಾಕರ ಶೆಟ್ಟಿ, ನಂದಯ್ಯ ಪೂಜಾರಿ, ನಾಗೇಶ್ ಪೂಜಾರಿ, ವಿದ್ಯಾ ಮೊದಲಾದವರಿದ್ದರು.
ದಿನಕ್ಕೆ 10 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತಗ್ಗರ್ಸೆ ಗ್ರಾಮದಲ್ಲಿ ಸರ್ವೇ ಸರ್ವೆ ನಂ. 170 ರಲ್ಲಿ 8.6 ಎಕ್ರೆ ಜಾಗವನ್ನು ಜಿಲ್ಲಾಧಿಕಾರಿಳು ಮಂಜೂರು ಮಾಡಿದ್ದು ಸರ್ಕಾರದಿಂದ ಅಮೃತ ನಿರ್ಮಾಣ ನಗರ ಯೋಜನೆಯಿಂದ ಸುಮಾರು 1 ಕೋಟಿ ಅನುದಾನ ಮಂಜೂರು ಮಾಡಿ ಕ್ರಿಯಾಯೋಜನೆ ಕಾಯ್ದಿರಿಸಲಾಗಿದೆ. ರಸ್ತೆ, ಕಾಂಪೋಂಡ್ ಮೊದಲಾದ ಕಾಮಗಾರಿ ಮಾಡಲು 6 ತಿಂಗಳಿನಿಂದ ಪ್ರಯತ್ನಿಸುತ್ತಿದ್ದು ಸ್ಥಳೀಯರು ವಿರೋಧಿಸುತ್ತಿದ್ದಾರೆ. ಸ್ವಚ್ಚ ಭಾರತ ಕಲ್ಪನೆಯಲ್ಲಿ ಇದು ಅತೀ ಅವಶ್ಯಕ ಕಾಮಗಾರಿಯಾಗಿದೆ. ಪರಿಸರ ಇಲಾಖೆಯ ಅನುಮತಿ ಬಳಿಕ ಘನ ತ್ಯಾಜ್ಯ ವಿಲೇವಾರಿ ಘಟಕ ಕೆಲಸ ಆರಂಭಿಸಲಿದ್ದೇವೆ. ಸ್ಥಳೀಯರ ವಿರೋಧದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡುತ್ತೇವೆ.
– (ನವೀನ್, ಮುಖ್ಯಾಧಿಕಾರಿ ಬೈಂದೂರು ಪಟ್ಟಣ ಪಂಚಾಯತ್)
6 ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಈ ಸ್ಥಳ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಯೋಗ್ಯವಲ್ಲ ಎಂದು ವರದಿ ನೀಡಿದೆ. ಈ ಘಟಕ ನಿರ್ಮಾಣವಾದರೆ ವಾಸನೆ ಮೊದಲಾದ ಸಮಸ್ಯೆಯಿಂದ ಸಾಯುತ್ತೇವೆ. ಇದು ವಿಷವಿದ್ದಂತೆ, ಈ ವಿಷ ವರ್ತುಲದ ನಡುವೆ ಬದುಕುವ ಬದಲು ವಿಷ ಕುಡಿದು ಸಾಯುವುದು ಲೇಸು. ಎಪ್ರಿಲ್ ಮೇ ತಿಂಗಳಿನಲ್ಲಿ ಹೊಳೆ ನೀರು ಕುಡಿಯಬೇಕಾಗಿದೆ. ಅದು ಕಲುಷಿತವಾದರೆ ಕುಡಿಯಲು ನೀರು ಇರುವುದಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿ ಘಟಕ ನಿರ್ಮಿಸಲು ಬಿಡೋದಿಲ್ಲ. ನಮ್ಮ ಮೇಲೆ ಜೆಸಿಬಿ ಹತ್ತಿಸಿ ಮುಂದೆ ಕಾಮಗಾರಿ ನಡೆಸಲಿ.
-ಗೋಪಾಲ ಪೂಜಾರಿ, ವಿದ್ಯಾ, ಗುಲಾಬಿ (ಸ್ಥಳೀಯ ನಿವಾಸಿಗಳು)
Comments are closed.