ಕುಂದಾಪುರ: ಹಳೆ ಪ್ರಕರಣವೊಂದರ ಆರೋಪಿ ಹಾಗೂ ಆತ ಕೃತ್ಯಕ್ಕೆ ಬಳಸಿದ ಸೊತ್ತು ಪತ್ತೆಗಾಗಿ ಬಂದಿದ್ದ ಕೊಪ್ಪ ಪೊಲೀಸ್ ಠಾಣೆ ಎಸ್.ಐ ಕೊಲೆಗೆ ಯತ್ನಿಸಿ ಪೊಲೀಸರನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಕೋಟೇಶ್ವರ ಗ್ರಾಮದ ಕಟ್ಕೇರಿ ರಸ್ತೆಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗುಲ್ವಾಡಿ ಮಾವಿನಕಟ್ಟೆಯ ಅಬ್ದುಲ್ ರವೂಫ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಮಾವಿನಕಟ್ಟೆ ನಿಜಾಮ್ ತಲೆಮರೆಸಿಕೊಂಡಿದ್ದಾನೆ.
ಘಟನೆ ವಿವರ:
ಕೊಪ್ಪ ಪೊಲೀಸ್ ಠಾಣೆ ಪಿಎಸ್ಐ ಶ್ರೀನಾಥ ರೆಡ್ಡಿ ಎನ್ನುವರು ಪ್ರಕರಣವೊಂದರ ಆರೋಪಿ ಡ್ಯಾನಿಶ್ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ವತ್ತು ಪತ್ತೆಗಾಗಿ ಕೊಪ್ಪ ಠಾಣೆ ಎ.ಎಸ್.ಐ ಗಂಗ ಶೆಟ್ಟಿ ಮತ್ತು ಸಿಬ್ಬಂದಿಗಳಾದ ಪ್ರಶಾಂತ್, ಅಮಿತ್ ಚೌಗಳೆ ಅವರೊಂದಿಗೆ ಖಾಸಗಿ ವಾಹನದಲ್ಲಿ ಜು.2 ರಂದು ಕುಂದಾಪುರಕ್ಕೆ ಬಂದು ಸಂಬಂಧಪಟ್ಡ ವಾಹನ ವಾಹನ ನೊಂದಣಿ ಮಾಲೀಕನ ವಿಳಾಸದ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದು ಸ್ಥಳೀಯ ಪೊಲೀಸರ ಸಹಾಯದಿಂದ ವಾಹನ ಮಾಲೀಕನನ್ನು ಭೇಟಿಯಾಗಿ ವಿಚಾರಿಸಿದ್ದು ಈ ವಾಹನವನ್ನು ತನ್ನ ಮಗ ಡ್ಯಾನಿಶ್ ಕೋಟೇಶ್ವರ ಕಡೆ ತೆಗೆದುಕೊಂಡು ಹೋಗಿದ್ದಾಗಿ ತಿಳಿಸಿದ್ದರು.
ಅದರಂತೆ ಆತನನ್ನು ಪೊಲೀಸರು ವಾಹನದಲ್ಲಿ ಕೂರಿಸಿಕೊಂಡು ಕಟ್ಕೇರಿ ತಲುಪಿದಾಗ ರಸ್ತೆಯಲ್ಲಿ ಸ್ಕೂಟಿಯಲ್ಲಿ ಬಂದ ಅಬ್ದುಲ್ ರವೂಫ್, ಕಾರಿನಲ್ಲಿ ಬಂದ ನಿಜಾಮ್ ಎನ್ನುವರು ಪೊಲೀಸರಿದ್ದ ವಾಹನವನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ನಿಲ್ಲಿಸಿದಾಗ ಪೊಲೀಸರು ತಾವು, ನಾವು ಪೊಲೀಸರೆಂದು ಹೇಳಿದರೂ “ನೀವು ಪೊಲೀಸರಾದರೇ ನಮಗೇನು, ನಮ್ಮ ಮನೆಗೆ ಬಂದು ಮರ್ಯಾದೆ ತೆಗೆಯುತ್ತೀರಾ, ಎಂದು ಅವಾಚ್ಯ ಶಬ್ದದಿಂದ ಬೈಯ್ದು “ನೀವು ಹೇಗೆ ಇಲ್ಲಿಂದ ಹೋಗುತ್ತೀರಾ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ, ದ್ವಿಚಕ್ರ ವಾಹನದಲ್ಲಿ ಬಂದ ಅಬ್ದುಲ್ ರವೂಫ್ ಪಿಎಸ್ಐ ಅವರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ಗುರಿಯಿಟ್ಟು ಕಲ್ಲನ್ನು ಎಸೆದಿದ್ದು ಅಷ್ಟರಲ್ಲಿ ಜೊತೆಗಿದ್ದ ಎ.ಎಸ್.ಐ ಗಂಗ ಶೆಟ್ಟಿ ಪಿಎಸ್ಐ ಅವರನ್ನು ಪಕ್ಕಕ್ಕೆ ಎಳೆದುಕೊಂಡಿದ್ದು, ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ಇದೇ ವೇಳೆ ಕಾರಿನಲ್ಲಿ ನಿಜಾಮ್ ಇತರ ಪೊಲೀಸ್ ರನ್ನು ಎಳೆದಾಡಿದ್ದು ಪಿಎಸ್ಐ, ಸಿಬ್ಬಂದಿಯವರು ತಾವು ಪೊಲೀಸರಾಗಿದ್ದು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಗುರುತಿನ ಚೀಟಿ ತೋರಿಸಿದರೂ ಅವಾಚ್ಯ ಶಬ್ದದಿಂದ ಬೈಯ್ದು ಮುಂದಕ್ಕೆ ಹೋಗದಂತೆ ತಡೆದಿದ್ದು ಈ ಸಂದರ್ಭ ಸಾರ್ವಜನಿಕರು ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಇತರ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
Comments are closed.