ಕರಾವಳಿ

ವೃತ್ತಿಯಲ್ಲಿ‌ ಟಿವಿ ಮೆಕ್ಯಾನಿಕ್, ಹೇಳೋದು‌ ಕಸ್ಟಂ ಅಧಿಕಾರಿ: ಸರ್ಕಾರಿ ಕೆಲಸ ಕೊಡಿಸೋದಾಗಿ ಲಕ್ಷಲಕ್ಷ ಪಂಗನಾಮ‌ವಿಕ್ಕಿದವ ಅರೆಸ್ಟ್..!

Pinterest LinkedIn Tumblr

ಉತ್ತರಕನ್ನಡ: ಸಾರ್ವಜನಿಕರ ಬಳಿ ತಾನೊಬ್ಬ ಕಸ್ಟಮ್ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕುಂದಾಪುರದ ಮೂಲದವನಾಗಿದ್ದು ಹಾಲಿ ಸೊರಬ ನಿವಾಸಿ ಮನೋಜ್ ಪೂಜಾರಿ (30). ಈತ ವೃತ್ತಿಯಲ್ಲಿ ಟಿವಿ ಮೆಕ್ಯಾನಿಕ್ ಆಗಿದ್ದಾನೆ.

ತಾನು ಹುಬ್ಬಳ್ಳಿ ವಿಭಾಗದ ಕಸ್ಟಮ್ ಅಧಿಕಾರಿ ಎಂದು ಸುಳ್ಳು ಹೇಳಿ ಶಿರಸಿಯ ಹಿತ್ತಲಗದ್ದೆ ಆರೆಕೊಪ್ಪದ ಮಂಜುನಾಥ್ ಹೆಗಡೆ ಹಾಗೂ ಸ್ನೇಹಿತರಿಗೆ ವಂಚಿಸಿದ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಂಜುನಾಥ್ ಹೆಗಡೆ ಹಾಗೂ ಅವರ ಸ್ನೇಹಿತರಿಗೆ ಆರೋಪಿ ಮನೋಜ್ ಪೂಜಾರಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 7 ಲಕ್ಷದ 70 ಸಾವಿರ ರೂಪಾಯಿ ಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಎಸ್ಪಿ ಸುಮನ್. ಡಿ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿವೈಎಸ್ಪಿ ರವಿ ಡಿ.ನಾಯ್ಕ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪಿಎಸ್ಐ ಈರಯ್ಯ ಡಿ.ಎನ್. ಪ್ರೊಬೇಶನರಿ ಪಿಎಸ್ಐ ದೇವೇಂದ್ರ ನಾಯ್ಕ, ಸಿಬ್ಬಂದಿಗಳಾದ ಚೇತನ್ ಎಚ್, ಮಹದೇವ ನಾಯ್ಕ, ಗಣಪತಿ ನಾಯ್ಕ, ಕುಬೇರಪ್ಪ, ಪ್ರದೀಪ್ ರೇವಣಕರ್, ಶ್ರೀಧರ, ಅರುಣ್ ಲಕ್ಷಮಪ್ಪ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Comments are closed.