(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ/ಬೈಂದೂರು: ಭಾನುವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಡುಪಿ ಜಿಲ್ಲಾದ್ಯಂತ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ಕುಂದಾಪುರ ತಾಲೂಕಿನಾದ್ಯಂತ ಮಂಗಳವಾರ ಮುಂಜಾನೆಯಿಂದ ಮಳೆ ಸುರಿಯುತ್ತಿದೆ. ಕೋಡಿ, ಹಳೆಅಳಿವೆ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದೆ. ತೆಕ್ಕಟ್ಟೆ, ಕಟ್ಕೇರಿ, ಕಾಳಾವರ, ಮಲ್ಯಾಡಿ, ಕೋಟೇಶ್ವರ ಭಾಗದಲ್ಲಿ ಕೃಷಿ ಭೂಮಿ ಜಲಾವೃತವಾಗಿದೆ. ಹೆದ್ದಾರಿಯಲ್ಲಿ ಕೃತಕ ಕೆರೆ ಸೃಷ್ಟಿಯಾಗಿದೆ. ಇನ್ನು ಕಾಳಾವರ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬ ಧರಾಶಾಹಿಯಾಗಿದ್ದರಿಂದ ಕೋಟೇಶ್ವರ-ಹಾಲಾಡಿ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು. ವಕ್ವಾಡಿ ಸಮೀಪ ವಾರಾಹಿ ಕಾಮಗಾರಿ ನಡೆಯುತ್ತಿರುವೆ ಪ್ರದೇಶದಲ್ಲಿ ಕಾಲುವೆ ಕೆಲವು ಮೀಟರ್ ಕುಸಿದಿದೆ.
ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಬೈಂದೂರು ಸೌಪರ್ಣಿಕ ನದಿ ನೀರಿನ ಮಟ್ಟ ಹೆಚ್ಚುತ್ತಿದೆ. ನದಿ ಪಾತ್ರದ ಸಾಲ್ಬುಡ, ನಾವುಂದ, ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಕಡ್ಕೆ, ಅರೆಹೊಳೆ ಮುಂತಾದ ಪ್ರದೇಶಗಳು ಮುಳುಗಡೆ ಭೀತಿಯಲ್ಲಿದ್ದು, ಸ್ಥಳೀಯರು ಇದೀಗ ಜಾನುವಾರುಗಳನ್ನು ಸಾಗಿಸಲು ಹರಸಾಹಸಪಡುತ್ತಿದ್ದಾರೆ. ಈ ಪ್ರದೇಶದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗಳು ಕೃತಕ ನೆರೆಯಿಂದ ಸಂಪೂರ್ಣ ಜಲಾವೃತಗೊಂಡಿದೆ.
ಬೈಂದೂರು ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಎ ಹನುಮಂತ ರಾಯ್, ಪಿಡಿಒ ಪ್ರಕಾಶ್, ಬೈಂದೂರು ವಿಎ ಮಂಜುನಾಥ ಬಿಲ್ಲವ ಮೊದಲಾದವರು ಜೊತೆಗಿದ್ದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಕಿರಣ್ ಗೌರಯ್ಯ, ಮಳೆಯಿಂದಾಗಿ ನೆರೆ ನೀರು ಹೆಚ್ಚಿರುವಲ್ಲಿ ಜನರಿಗೆ ಅಗತ್ಯ ಮುನ್ಸೂಚನೆ ನೀಡಲಾಗಿದೆ. ಅನಿವಾರ್ಯತೆ ಬಿದ್ದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುತ್ತದೆ. ದೋಣಿ ಬೇಡಿಕೆ ಇರುವಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸೇಫ್ಟಿ ಜಾಕೇಟ್ ಬೇಡಿಕೆಯಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
Comments are closed.