ಕರಾವಳಿ

ಬಹುಕಾಲದ ಬೇಡಿಕೆ ಈಡೇರಿಕೆ: ಕುಂದಾಪುರ-ಕೆರಾಡಿಗೆ ಸಂಚರಿಸಲಿದೆ ಕೆ.ಎಸ್.ಆರ್.ಟಿ.ಸಿ ಬಸ್; ಶಾಸಕ ಸುಕುಮಾರ ಶೆಟ್ಟಿ ಚಾಲನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ವಿದ್ಯಾರ್ಥಿಗಳು ಸಹಿತ ನಾಗರಿಕರ ಬಹುಕಾಲದ ಬೇಡಿಕೆಯಾಗಿದ್ದ ಕುಂದಾಪುರ-ಕೆರಾಡಿ ಸಂಪರ್ಕಕ್ಕಾಗಿ ಸರ್ಕಾರಿ ಬಸ್ಸು ಓಡಾಟದ ಕನಸು ಇಂದು ನನಸಾಗಿದೆ. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮುತುವರ್ಜಿಯಲ್ಲಿ ಗುರುವಾರದಿಂದ ಕುಂದಾಪುರ- ಕೆರಾಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಅಧೀಕೃತವಾಗಿ ಆರಂಭವಾಗಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ನೆಂಪುವಿನಲ್ಲಿ ಚಾಲನೆ ನೀಡಿದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಗ್ರಾಮದ ಬಹಳಷ್ಟು ವಿದ್ಯಾರ್ಥಿಗಳು ಕುಂದಾಪುರದ ವಿದ್ಯಾಸಂಸ್ಥೆಗಳಿಗೆ ಬರುತ್ತಿದ್ದು ಬಹಳಷ್ಟು ವರ್ಷಗಳಿಂದ ಸರ್ಕಾರಿ ಬಸ್ ಸೌಕರ್ಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರು. ಈ ಬಗ್ಗೆ ಹಲವು ಬಾರೀ ಸಂಬಂದಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಕ್ಷೇತ್ರದಲ್ಲಿನ ಅಗತ್ಯವಿರುವ ಗ್ರಾಮೀಣ ಭಾಗಗಳಿಗೆ ಸರ್ಕಾರಿ ಬಸ್ ಸಂಪರ್ಕ‌‌ ಕಲ್ಪಿಸುವ‌ ಕ್ರಮಕೈಗೊಳ್ಳಲು‌ ಸೂಚನೆ ನೀಡಲಾಗಿತ್ತು. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸುವ್ಯವಸ್ಥಿತ ಸಮಾಜ ನಿರ್ಮಾಣ ಸಾಧ್ಯ ಎಂಬ ಪರಿಕಲ್ಪನೆಯಡಿಯಲ್ಲಿ ಕೆರಾಡಿ ಭಾಗಕ್ಕೆ ಬಸ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭ ಕೆರಾಡಿ ಗ್ರಾ.ಪಂ ಉಪಾಧ್ಯಕ್ಷ ಸುದರ್ಶನ್ ಶೆಟ್ಟಿ ಬೆಳ್ಳಾಲ, ಸದಸ್ಯ ರಾಘವೇಂದ್ರ ಕೊಠಾರಿ, ಮುಖಂಡರಾದ ರವಿ ಶೆಟ್ಟಿ ಚಿತ್ತೂರು, ಹರ್ಷ ಶೆಟ್ಟಿ, ವಿಜಯ ಶೆಟ್ಟಿ, ಕುಂದಾಪುರ ಕೆ.ಎಸ್.ಆರ್.ಟಿ.ಸಿ ಡಿಪೋದ ನಾಗರಾಜ ಖಾರ್ವಿ‌ ಮೊದಲಾದವರಿದ್ದರು.

ಬಸ್ ವೇಳಾಪಟ್ಟಿ:
ಬೆಳಿಗ್ಗೆ 7.15ಕ್ಕೆ ಕುಂದಾಪುರದಿಂದ ಹೊರಡುವ ಈ ಬಸ್ ಹೆಮ್ಮಾಡಿ-ಮಾರಣಕಟ್ಟೆ ಮಾರ್ಗವಾಗಿ ಸಂಚರಿಸಲಿದೆ. ಇನ್ನು ಕೆರಾಡಿಯಿಂದ ಬೆಲ್ಲಾಳ, ಹೆಮ್ಮಕ್ಕಿ, ನೇರಳಕಟ್ಟೆ ಮಾರ್ಗವಾಗಿಯೂ ಸಂಚರಿಸಲಿದೆ.

ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು..!
ಕೊಲ್ಲೂರು-ಕುಂದಾಪುರ ಹಾಗೂ ಕೆರಾಡಿ-ಕುಂದಾಪುರಕ್ಕೆ ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಕುಂದಾಪುರದಲ್ಲಿ ತಿಂಗಳ ಹಿಂದೆ ಪ್ರತಿಭಟನೆ ನಡೆದಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪತಿಷತ್ (ಎಬಿವಿಪಿ) ನೇತೃತ್ವದಲ್ಲಿ ನಾಲ್ಕಾರು ಕಾಲೇಜು ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಶಾಸ್ತ್ರೀ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧದ ತನಕ ಮೆರವಣಿಗೆ ಮೂಲಕ ಸಾಗಿ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು.

Comments are closed.