ಕರಾವಳಿ

ಬಸ್ ಪ್ರಯಾಣಿಕರ ಸುಸಜ್ಜಿತ ತಂಗುದಾಣ‌ ನಿರ್ಮಾಣಕ್ಕಾಗಿ ಕಾಳಾವರ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರ ಆಗ್ರಹ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನ ಕೋಟೇಶ್ವರದಿಂದ ಹಾಲಾಡಿ ಸಂಪರ್ಕ ರಾಜ್ಯ ಹೆದ್ದಾರಿ‌ ನಡುವಿನ‌ ಕಾಳಾವರ ಎಂಬಲ್ಲಿ ಎಂಬಲ್ಲಿ ಈ ಹಿಂದೆ ಇದ್ದ ಸ್ಥಳದಲ್ಲಿ ಸುಸಜ್ಜಿತ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು. ಅಲ್ಲಿಯವರೆಗೂ ಈಗಿನ ತಾತ್ಕಾಲಿಕ ಬಸ್ ನಿಲ್ದಾಣ ತೆರವು ಮಾಡಬಾರದಾಗಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಾಳಾವಾರ ಸರ್ಕಲ್ ನಲ್ಲಿ ರಸ್ತೆ ಅಗಲೀಕರಣದ ವೇಳೆ ಮೊದಲಿದ್ದ ಬಸ್ ನಿಲ್ದಾಣ ತೆರವು ಮಾಡಲಾಗಿತ್ತು. ಇದರಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತುಂಬಾ ಪರದಾಡುತ್ತಿದ್ದು, ಗ್ರಾಮ ಪಂಚಾಯತ್ ಈ ಹಿಂದೆ ನಿರ್ಣಯಿಸಿದಂತೆ ಸ್ಥಳೀಯ ಸಾರ್ವಜನಿಕರ ಸಭೆ ಕರೆದು ಮೊದಲಿದ್ದ ಸ್ಥಳದಲ್ಲಿಯೇ ಸ್ಥಳ ಪರಿಶೀಲನೆ ಮಾಡಿ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದು ಇದುವರೆಗೂ ನಿರ್ಮಿಸಿಕೊಟ್ಟಿರಲಿಲ್ಲ. ಮಳೆಗಾಲದ ಹಿನ್ನೆಲೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೂ ತೊಂದರೆ ಯಾಗುವುದನ್ನು ಮನಗೊಂಡು ಗ್ರಾಮಸ್ಥರು ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು. ಇದರಿಂದಾಗಿ ಕಾಳಾವಾರ,ಅಸೋಡು,ವಕ್ವಾಡಿ ಗ್ರಾಮಸ್ಥರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ತಾತ್ಕಾಲಿಕ ಬಸ್ ತಂಗುದಾಣವನ್ನು ತೆರವು ಮಾಡುವ ಬಗ್ಗೆ ಗ್ರಾಮಸ್ಥರಿಂದ ಆಕ್ರೋಷ ವ್ಯಕ್ತವಾಗಿದೆ.

ಜನರ ಬೇಡಿಕೆ ಏನು..?
ಬಸ್ ನಿಲ್ದಾಣವನ್ನು ಸಮೀಪದ ಬಾರ್ ಆಂಡ್ ರೆಸ್ಟೋರೆಂಟ್ ಎದುರು ನಿರ್ಮಿಸುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಳಾವರ ಸರ್ಕಲ್ ಬಳಿ ಮೊದಲಿದ್ದ ಸ್ಥಳದ ಹತ್ತಿರವೇ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಲು ಸಾರ್ವಜನಿಕರು ಆಗ್ರಹಿಸಿದ್ದಲ್ಲದೆ ಆ ತನಕ ಈಗಿರುವ ತಾತ್ಕಾಲಿಕ ಬಸ್ ತಂಗುದಾಣವನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಕಾಳಾವಾರ, ಅಸೋಡು, ವಕ್ವಾಡಿ ಗ್ರಾಮಸ್ಥರು ಕೋರಿದ್ದಾರೆ.

ಈ ವೇಳೆ ಸಾಮಾಜಿಕ ಕಾರ್ಯಕರ್ತರಾದ ಸುಧೀರ್ ಜಿ. ಕಾಳಾವರ, ಸತೀಶ್ ಕಾಂಚನ್ ಕಾಳಾವರ, ರಾಘವೇಂದ್ರ ಬಿ. ಅಸೋಡು, ರಘುರಾಮ, ಮೀನಾ ಕಾಳಾವರ, ರಾಜೀವಿ, ಜಯಲಕ್ಷ್ಮೀ, ಪಾರ್ವತಿ ಮೊದಲಾದವರು ಇದ್ದರು.

ಪ್ರತಿಭಟನೆ, ಮೆರವಣಿಗೆ, ಗ್ರಾ.ಪಂ‌ ಎದುರು ಧರಣಿ..!
ಬಸ್ ಪ್ರಯಾಣಿಕರ ತಂಗುದಾಣ ವಿಚಾರದಲ್ಲಿ ಗ್ರಾಮಸ್ಥರು ಸೋಮವಾರ ಬೆಳಿಗ್ಗೆ ಕಾಳಾವರ ಸರ್ಕಲ್ ಬಳಿ‌ ತಾತ್ಕಾಲಿಕ ಬಸ್ ನಿಲ್ದಾಣದ ಎದುರು ಪ್ರತಿಭಟನೆ‌ ಹಮ್ಮಿಕೊಂಡಿದ್ದು ಸ್ಥಳಕ್ಕೆ ಗ್ರಾ.ಪಂ‌ ಸಂಬಂದಪಟ್ಟವರು ಬಾರದಿದ್ದಾಗ ಅಲ್ಲಿಂದ ಕಾಳಾವರ ಗ್ರಾ.ಪಂ ತನಕ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಲಾಯಿತು. ಅಲ್ಲಿಯೂ ಮನವಿ ಸ್ವೀಕರಿಸಲು ಯಾರೋಬ್ಬ ಜನಪ್ರತಿನಿಧಿ, ಪಿಡಿಓ ಇಲ್ಲದನ್ನು ಕಂಡು ಗ್ರಾಮಸ್ಥರು ಆಕ್ರೋಷ ಹೊರಹಾಕಿದರು. ಪಿಡಿಓ ಆಗಮಿಸಿ ಮನವಿ ಸ್ವೀಕರಿಸುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಕೆಲ ಗಂಟೆಗಳ ಕಾಲ ಬಂದ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಂಡುರಂಗ ಶೇಟ್ ಗ್ರಾಮಸ್ಥರ ಮನವಿ ಸ್ವೀಕರಿಸಿದರು.

ಬಾರ್ ಸಮೀಪ ಬಸ್ ನಿಲ್ದಾಣ ಮಾಡಿದರೆ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ನಿಲ್ಲಲು‌ ಕಷ್ಟವಾಗಲಿದೆ. ಮೊದಲು ಇದ್ದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮಾಡಿಕೊಡಬೇಕು. ಬಡವರ ಮನವಿಗೆ ಗ್ರಾ.ಪಂ ಸ್ಪಂದನೆ ನೀಡದಿರುವುದು ದುರಂತ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಘ್ರ ಹೋರಾಟ ಮಾಡಲಾಗುತ್ತದೆ.
– ಸಾಕು (ಸ್ಥಳೀಯ ಮಹಿಳೆ)

ನಮ್ಮ ಅಮ್ಮನ ಕಾಲದಿಂದಲೂ ಅದೇ ಸ್ಥಳದಲ್ಲಿ ಬಸ್ ನಿಲ್ದಾಣವಿತ್ತು. ಅಪಘಾತ ವಲಯ ಎಂಬ ನೆಪದಲ್ಲಿ ಈಗ ಅದನ್ನು ಸ್ಥಳಾಂತರಿಸುವುದು‌ ಸೂಕ್ತವಲ್ಲ. ಈ ಹಿಂದೆ ಇದ್ದ ಸ್ಥಳದಲ್ಲಿಯೇ ಸುಸಜ್ಜಿತ ತಂಗುದಾಣ ನಿರ್ಮಿಸಿಕೊಡಬೇಕು.
– ರಾಜೀವಿ (ಸ್ಥಳೀಯರು)

ಬಸ್ ತಂಗುದಾಣಕ್ಕೆ ಸ್ಥಳ ಮಹಜರು ಮಾಡಿ 8 ತಿಂಗಳಾಗಿದೆ. ಕೇಳಿದರೆ ಇಂದು ನಾಳೆ ಎಂಬ ಹಾರಿಕೆ ಉತ್ತರ ನೀಡುತ್ತಿರುವುದರಿಂದ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ಮಾಡಲಾಗಿದೆ. ಆದರೆ‌ ಮನವಿ ಸ್ವೀಕರಿಸಲು ಕೂಡ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಬಾರದೆ ನಮ್ಮನ್ನು ಗಂಟೆಗಟ್ಟಲೇ ಕಾಯಿಸಿದ್ದಾರೆ.
– ಸತೀಶ್ ಕಾಂಚನ್ ಕಾಳಾವರ (ಸಾಮಾಜಿಕ ಕಾರ್ಯಕರ್ತ)

 

Comments are closed.