ಕುಂದಾಪುರ: ಕೋಮು ಸಂಘರ್ಷ ನಿಷೇಧ ಕಾಯ್ದೆ ತರುವುದರಿಂದಲೇ ಗೂಂಡಾಗಿರಿ, ಮಾನವ ಹತ್ಯೆಗಳು ನಿಲ್ಲುತ್ತದೆ ಎನ್ನುವುದಾದರೆ ಈ ಕಾಯ್ದೆ ತರಲು ಯಾವ ಸಂಕೋಚವೂ ಇಲ್ಲ. ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರದಲ್ಲಿ ಮಾತನಾಡಿದ ಅವರು, ಬಹುತೇಕ ಬಿಲ್ಲವ ಜಾತಿಯ ಹಿಂದೂ ಮುಖಂಡರು ಹತ್ಯೆಗಳಾಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಧರ್ಮಾಂಧತೆ ಒಂದು ಜಾತಿಗೆ ಸೀಮಿತವಾಗಿ ನಿಂತಿಲ್ಲ. ಎಲ್ಲಾ ಜಾತಿಯ, ಹಿಂದೂತ್ವವಾದಿಗಳ ಮೇಲೆ, ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ ಮಾಡುವಂತಹ ವ್ಯವಸ್ಥಿತ ಸಂಚುಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವನ್ನೂ ಹತ್ಯೆ ಎಂದು ಪರಿಗಣಿಸಿ ಯಾರನ್ನೆಲ್ಲಾ ಬಂಧನ ಮಾಡಬೇಕು ಆ ಕೆಲಸ ಮಾಡುತ್ತಿದ್ದೇವೆ. ಇದರ ಹಿಂದಿರುವ ತಾರ್ಕಿಕ ಭಯೋತ್ಪಾದನೆ ಬಗ್ಗೆ ಗಮನಿಸಿ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಿಜೆಪಿ ಯುವ ಮುಖಂಡರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರಿಗೆ ಕೋಪ- ನೋವಾದಾಗ ಇವೆಲ್ಲವೂ ಸಹಜ. ನಾವು ಪಕ್ಷಕ್ಕಾಗಿ, ಹಿಂದೂತ್ವಕ್ಕಾಗಿ ಹೋರಾಡಿ ನಿಮ್ಮನ್ನೆಲ್ಲಾ ಗೆಲ್ಲಿಸಿದ್ದೇವೆ. ನಮ್ಮ ನೋವನ್ನು ತೋಡಿಕೊಳ್ಳಲು ನಾವೆಲ್ಲಾ ರಾಜೀನಾಮೆ ನೀಡುತ್ತೇನೆಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರ ಆಕ್ರೋಶದ ಹಿಂದೆ ನಿಜವಾದ ಕಳಕಳಿ ಇದೆ. ನಮ್ಮದೇ ಕಾರ್ಯಕರ್ತರು, ನಮ್ಮನ್ನು ಗೆಲ್ಲಿಸಿದ್ದಾರೆ. ಕಷ್ಟಪಟ್ಟು ನಮ್ಮೊಂದಿಗೆ ಓಡಾಟ ಮಾಡಿದ್ದಾರೆ. ಅಂತವರ ಮನಸ್ಸಿಗೆ ನೋವಾದಾಗ ಆಕ್ರೋಶ ಹೊರಹಾಕುವುದು ಸಾಮಾನ್ಯ. ಇದನ್ನು ಅರ್ಥಮಾಡಿಕೊಂಡು ಕಾರ್ಯಕರ್ತರ ಹೇಳಿರುವ ವಿಚಾರದ ಬಗ್ಗೆ ಗಮನ ಕೊಡುತ್ತೇವೆ ಎಂಬ ವಿಶ್ವಾಸದ ಮಾತನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹಾಗೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಎಲ್ಲವೂ ಸರಿಯಾಗಲಿದೆ ಎಂದರು.
ಇಡೀ ಸರ್ಕಾರ ಕುಳಿತು ಒಟ್ಟಾಗಿ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದು ಬಿಟ್ಟರೆ ಇದಕ್ಕೆ ಬೇರೆ ಮಾರ್ಗಗಳಿಲ್ಲ. ಇಂತಹ ಮಾನಸಿಕತೆ ಇರುವವರು ತಲೆ ಎತ್ತಬಾರದು ಅನ್ನುವುದಷ್ಟೇ ಗುರಿ. ಅದಕ್ಕೋಸ್ಕರ ಪೊಲೀಸ್ ಬಲ, ಇಂಟೆಲಿಜೆನ್ಸಿ ಬಲವನ್ನು ಹೆಚ್ಚು ಮಾಡುತ್ತೇವೆ. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಜಾಗೃತೆ ವಹಿಸುತ್ತೇವೆ. ನಡೆದ ಪ್ರಕರಣಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪ್ರವೀಣ್ ಹತ್ಯೆ ದುರಂತದ ಬಗ್ಗೆ ಇಡೀ ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು ಸಂಕಟ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಹತ್ಯೆಯ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸುಮಾರು ಒಂದು ಲಕ್ಷ ಜನ ಸೇರುವ ಜನೋತ್ಸಾಹ ಕಾರ್ಯಕ್ರಮವನ್ನು ರದ್ದುಪಡಿಸಿ ನೇರವಾಗಿ ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರ ಹಣ ನಿಡಿದ್ದಾರೆ, ಅಗತ್ಯ ಬಿದ್ದರೆ ಉತ್ತರ ಪ್ರದೇಶ ಮಾದರಿಯನ್ನಾದರೂ ಜಾರಿಗೊಳಿಸಿ ಭಯೋತ್ಪಾದಕರನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಮಾಡಬೇಕು ಅವೆಲ್ಲವನ್ನೂ ಮಾಡುತ್ತೇವೆ. ಒಟ್ಟಾರೆ ಇಡೀ ಸರ್ಕಾರ ಒಂದು ತಂಡವಾಗಿ ಭಯೋತ್ಪಾದನೆ, ಮತೀಯವಾದವನ್ನು ನಿಯಂತ್ರಣ ಮಾಡುತ್ತದೆ ಎಂದರು.
ಮುಖ್ಯಮಂತ್ರಿಗಳ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಪ್ರತಿರೋಧವನ್ನು ಗಮನಿಸಿ ತಕ್ಷಣ ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿ ಹೋಗಿದ್ದಾರೆ. ಹಿಂಸೆ ಯಾವ ಧರ್ಮದಲ್ಲಿ ನಡೆದರೂ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂದರು. ಸಂಸದ ತೇಜಸ್ವಿ ಸೂರ್ಯ ಅವರ ವೈರಲ್ ಆಡಿಯೋದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದ ತೇಜಸ್ವಿ ಸೂರ್ಯ ಏನು ಹೇಳಿದ್ದಾರೊ ನನಗೆ ಗೊತ್ತಿಲ್ಲ. ಕೇಳಿದ ಬಳಿಕ ಪ್ರತಿಕ್ರಿಯಿಸುವೆ ಎಂದರು.
Comments are closed.