ಕರಾವಳಿ

ಸಿದ್ದರಾಮಯ್ಯ ಅವರ ಧ್ವನಿ ಪ್ರಸ್ತುತ ಕಾಲಘಟ್ಟದಲ್ಲಿ ಕರಾವಳಿ, ಮಲೆನಾಡಿಗೆ ಹೆಚ್ಚು ಅಗತ್ಯವಾಗಿದೆ: ವೈ.ಎಸ್.ವಿ ದತ್ತ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಪ್ರಸ್ತುತ ವ್ಯವಸ್ಥೆಯಲ್ಲಿ ಕಾಡುತ್ತಿರುವ ಅವ್ಯವಸ್ಥೆ, ಅವಾಂತರಗಳಿಗೆ ಕಾರಣವಾಗಿರುವ ಮತಾಂಧ, ಮೂಲಭೂತ ಶಕ್ತಿಗಳ ವಿರುದ್ಧ ಗಟ್ಟಿಯಾಗಿ ಮಾತನಾಡುವ ಏಕೈಕ ಧ್ವನಿ ಅಂದರೆ ಸಿದ್ದರಾಮಯ್ಯ. ಆದುದರಿಂದ ಸಿದ್ದರಾಮಯ್ಯ ಅವರ ಧ್ವನಿ ಬೇರೆ ಎಲ್ಲ ಕಡೆಗಳಿಗಿಂತ ಕರಾವಳಿ, ಮಲೆನಾಡು ಪ್ರದೇಶಗಳಿಗೆ ಹೆಚ್ಚು ಅಗತ್ಯವಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಪ್ರಯುಕ್ತ ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಲಾದ ಜನನಾಯಕ ಸಿದ್ಧರಾಮಯ್ಯ-75 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಎಂದಿಗೂ ಸಣ್ಣತನದ ರಾಜ ಕಾರಣ ಮಾಡಿಲ್ಲ. ವಿರೋಧ ಪಕ್ಷದವರಿಗೂ ತಾರತಮ್ಯ ಎಸಗಿಲ್ಲ. ಎಲ್ಲ ಶಾಸಕರ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ದೊಡ್ಡತನ ರಾಜಕಾರಣ ಮಾಡಿದವರು. ಅಧಿಕಾರಕ್ಕೆ ತನ್ನ ನಿಲುವುನವ್ಲಿ ರಾಜೀಯಾಗಲೂ‌ ಇಲ್ಲ, ಮಾರಿಕೊಂಡಿಲ್ಲ. ಸಿದ್ಧರಾಮಯ್ಯ ಎಲ್ಲ ರಾಜಕಾರಣಿಗಳಿಂದ ವಿಭಿನ್ನ ಹಾಗೂ ವಿಶೇಷವಾಗಿ ಕಾಣಲು ಅವರ ವೈಚಾರಿಕ ಸ್ಪಷ್ಟತೆ, ತಾತ್ವಿಕ ಬದ್ಧತೆ ಎಂದಿಗೂ ಬದಲಾಗದೆ ಇರುವುದು ಕಾರಣ ಎಂದರು.

ಅಹಿಂದ ಸಮುದಾಯ ಇಂದಿಗೂ ಸಿದ್ಧರಾಮಯ್ಯ ಅವರಲ್ಲಿ ಆಸೆ ಭರವಸೆಯನ್ನು ಇಟ್ಟುಕೊಂಡಿದೆ. ಇವರು ಸಾಮಾಜಿಕ ನ್ಯಾಯದ ಪರಿರಕಲ್ಪನೆಯನ್ನು ಓಟು ಬ್ಯಾಂಕಿಗಾಗಿ, ಮತ ಸೆಳೆಯುವಾಗ ತಂತ್ರವಾಗಿ ಮಾಡಿಕೊಂಡಿಲ್ಲ ಎಂಬುದು ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಬಳಿಕ ಸಾಬೀತು ಪಡಿಸಿದ್ದಾರೆ ಎಂದರು.

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಜನರಿಗೆ ಉತ್ತಮ‌ಭಾಗ್ಯಗಳನ್ನು ನೀಡಿದ್ದು, ಅಹಿಂದ ನಾಯಕನಾಗಿ ಬಡವರು, ಶೋಷಿತರು ಹಾಗೂ ದಲಿತ ದಮನಿತರ ಧ್ವನಿಯಾಗಿದ್ದ ಸಿದ್ದರಾಮಯ್ಯ ಅಂತಹ ಪ್ರಬುದ್ಧ ರಾಜಕಾರಣಿ ಸೋಲಲು ಅವರ ನಿಲುವು ಹಾಗೂ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದ್ದು ಒಂದು‌ ಕಾರಣ. ಈ ರಾಜ್ಯದಲ್ಲಿ ಮುಂದಿನ ನಾಯಕ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಮೊನ್ನೆಯ ದಾವಣೆಗೆರೆ ಸಮಾವೇಶದಲ್ಲಿ‌ ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ. ಇಂದಿನ ಅರಾಜಕತೆಯನ್ನು ಸರಿಪಡಿಸಲು ಸಿದ್ದರಾಮಯ್ಯ ಅವರಂತಹ ಆಡಳಿತಗಾರನಿಂದ ಮಾತ್ರವೇ ಸಾಧ್ಯ. ಸರಕಾರದ ಆಡಳಿತ ವೈಫಲ್ಯ‌ ಮುಚ್ಚಿಟ್ಟು ಹಿಜಾಬ್, ಹಲಾಲ್ ಮೊದಲಾದ ಸಮಸ್ಯೆ ಸೃಷ್ಟಿಸಿ ಜನರನ್ನು ಬೇರಡೆಗೆ ಸೆಳೆದು‌ಚುನಾವಣೆ ಎದುರಿಸುವ ಕುತಂತ್ರ ಮಾಡಲಾಗುತ್ತಿದೆ. ನಾವು ಎಚ್ಚರದಿಂದ ಇಲ್ಲವಾದಲ್ಲಿ ಮತ್ತೆ ನರಕದಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದವರು ಹೇಳಿದರು.

ಸಿದ್ಧರಾಮಯ್ಯ ಅವರ ಅಂತರಂಗ, ಬಹಿರಂಗ ಎರಡು ಒಂದೇ ಆಗಿದೆ. ಅವರು ಹಿಂದು ವಿರೋಧಿ ಎಂಬ ಅರ್ಥಹೀನ ಟೀಕೆಗಳನ್ನು ಒಪ್ಪಲಾಗುವುದಿಲ್ಲ. ಸಿದ್ದರಾಮಯ್ಯ ಅವರು ವಿವಿಧ ವಿಚಾರದಲ್ಲಿ ಬದಲಾಗಬೇಕೆಂಬ ಬಗ್ಗೆ ನನಗೆ ಹಲವು ಪತ್ರ, ವಿಚಾರಗಳು ಬಂದಿತ್ತು. ಆದರೆ ಅವರ ಸಿದ್ದಾಂತ ಮೀರಿ ಸುಳ್ಳು ಹೇಳಿ, ಬದಲಾಗುವುದು ಅವರಿಂದ ಸಾಧ್ಯವಿಲ್ಲ ಎನ್ನುವುದು ಸತ್ಯಾಂಶ. ಇಂದಿನ ರಾಜಕಾರಣಿಗಳು ಕೊಟ್ಟ ಮಾತು ಉಳಿಸಿಕೊಳ್ಳುವುದಿಲ್ಲ. ಆದರೆ ನುಡಿದಂತೆ ನಡೆಯುವ ಬದ್ದತೆ ಮೂಲಕ ಸಿದ್ದರಾಮಯ್ಯ ಜನರಿಗೆ ಇಷ್ಟವಾಗುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿಗಳು ತುಂಬಿದ್ದಾರೆ ಎನ್ನುವುದನ್ನು ಒಪ್ಪಲಾಗುವುದಿಲ್ಲ. ಜನನಾಯಕ ಸಿದ್ದರಾಮಯ್ಯ ನಾಯಕತ್ವಕ್ಕೆ ಬದಲಾವಣೆ ಬಯಸುತ್ತಿದ್ದಾರೆ. ಯಾವೊಬ್ಬ ವ್ಯಕ್ತಿ ಹುಟ್ಟುಹಬ್ಬಕ್ಕೆ ನಿರೀಕ್ಷೆಗೂ ಮೀರಿ ಜನರು ಬರುತ್ತಾರೆಂದರೆ ಅದು ಆ ವ್ಯಕ್ತಿ‌ಮೇಲಿನ ವಿಶ್ವಾಸವಾಗಿದ್ದು ಆ ವ್ಯಕ್ತಿಯಲ್ಲಿ ಮಾತೃ ಹೃದಯ ಇದೆಯೆಂಬುದನ್ನು ನಾವು ಮನಗಾಣಬೇಕು ಎಂದರು.

ಅಧ್ಯಕ್ಷತೆಯನ್ನು ಶಿವಮೊಗ್ಗದ ಲೇಖಕ, ಪತ್ರಕರ್ತ ಬಿ.ಚಂದ್ರೇಗೌಡ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ನಿರಂಜನ್ ಹೆಗ್ಡೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕೆಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಲೇರಿಯನ್ ಮೆನೇಜಸ್, ಸಾಮಾಜಿಕ ಹೋರಾಟಗಾರ್ತಿ ಗೌರಿ ಕೆಂಜೂರು, ಸಾಸ್ತಾನ ಸಿಎ ಸೊಸೈಟಿ ಅಧ್ಯಕ್ಷ ಶ್ರೀಧರ್ ಪಿ.ಎಸ್., ಬೈಂದೂರು ಅಂಜಲಿ ಆಸ್ಪತ್ರೆಯ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ವಕೀಲ ಮಂಜುನಾಥ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಶಿಧರ್ ಹೆಮ್ಮಾಡಿ ವಂದಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ತಂಡದಿಂದ ದೇಶ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.

Comments are closed.