(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸೋಮವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸ್ಸಾಗುವಾಗ ಕಾಲುಸಂಕದಿಂದ ಜಾರಿ ಹರಿಯುವ ನದಿಗೆ ಬಿದ್ದು ನಾಪತ್ತೆದ ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಚಪ್ಪರಿಕೆ ಸರಕಾರಿ ಹಿ.ಪ್ರಾ.ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಮಂಗಳವಾರ ಮಧ್ಯಾಹ್ನ 3 ಗಂಟೆ ತನಕ ಪತ್ತೆಯಾಗಿಲ್ಲ.
ಸನ್ನಿಧಿ ಮೃತದೇಹ ಪತ್ತೆಗೆ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು, ಈಜುಪಟುಗಳು ಹಾಗೂ ಮುಳುಗು ತಜ್ಞರು ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಡಿಸಿ, ಮಾಜಿ ಶಾಸಕ ಭೇಟಿ..
ಮೃತ ಬಾಲಕಿಯ ಮನೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಇಂದು (ಆ.9 ಮಂಗಳವಾರ) ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಕಾಲುಸಂಕ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆಗಮಿಸಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಬೈಂದೂರು ತಹಶಿಲ್ದಾರ್ ಕಿರಣ್ ಗೌರಯ್ಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
Comments are closed.