ಕರಾವಳಿ

ಕಾಲುಸಂಕದಿಂದ ಬಿದ್ದು ನೀರುಪಾಲಾದ ಸನ್ನಿಧಿ ಮೃತದೇಹ 48 ಗಂಟೆ ಬಳಿಕ ಪತ್ತೆ: ಶೋಕಸಾಗರದಲ್ಲಿ ಕುಟುಂಬದವರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಶಾಲೆಯಿಂದ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕಾಲುಸಂಕ ದಾಟುತ್ತಿದ್ದ ವೇಳೆ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾದ ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿಯಾದ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ 48 ಗಂಟೆ ಬಳಿಕ ಪತ್ತೆಯಾಗಿದೆ.

ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ನಿರಂತರವಾಗಿ ಶೋಧ ಕಾರ್ಯ ನಡೆಸಲಾಗಿತ್ತು
ಬುಧವಾರ ಸಂಜೆ ಆಕೆ‌ ಮೃತದೇಹ ಕಾಲುಸಂಕದಿಂದ 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿಗಳು, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ ಮುಂದಾಳತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿ ನೂರಕ್ಕೂ ಅಧಿಕ ಮಂದಿ‌ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಾಚರಣೆಗೆ ಎರಡು ದೋಣಿಗಳನ್ನು ಬಳಿಸಿಕೊಳ್ಳಲಾಗುತ್ತಿದೆ. ಮೀನುಗಾರರು ಹಾಗೂ ಈಜುಪಟುಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದು ಸ್ಥಳದಲ್ಲಿದ್ದ ತಹಶಿಲ್ದಾರ್ ಕಿರಣ್ ಗೌರಯ್ಯ ಅವರು ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ನೀಡಿದರು.

ಉಡುಪಿ‌ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕುಂದಾಪುರ ಉಪವಿಭಾಗಾಧಿಕಾರಿ‌ ಕೆ. ರಾಜು ಮಾರ್ಗದರ್ಶನದಲ್ಲಿ ಬಾಲಕಿ ಮೃತದೇಹ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಬೈಂದೂರು ತಹಶಿಲ್ದಾರ್ ಕಿರಣ್ ಗೌರಯ್ಯ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಎನ್., ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಭೇಟಿ ನೀಡಿದ್ದಾರೆ.

ಮನೆಯವರ ಆಕ್ರಂಧನ..
ಕಾಲ್ತೋಡು ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೇ ಪುತ್ರಿ ಸನ್ನಿಧಿ ನೀರು ಪಾಲಾಗಿ 48 ಗಂಟೆಯಾಗಿದ್ದು ಮನೆಮಂದಿ ಆಕ್ರಂಧನ ಮುಗಿಲುಮುಟ್ಟಿದೆ. ಒಂದೆಡೆ ಮಗಳ ಸಾವಿನ ನೋವು, ಮತ್ತೊಂದೆಡೆ ಇನ್ನೂ ಸಂಜೆತನಕ ಮೃತದೇಹ‌ ಸಿಗದ ಕಾರಣ ಮನೆಮಂದಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಒಂದು ಕಾಲು ಸೇತುವೆ ಮಾಡಿಕೊಟ್ಟಿದ್ದರೆ ಮಗು ಬದುಕುತ್ತಿತ್ತು ಎಂದು ಸನ್ನಿಧಿ ಕುಟುಂಬಿಕರು ಕಣ್ಣೀರು‌ ಹಾಕಿದ್ದಾರೆ. ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಸನ್ನಿಧಿ ಓದುತ್ತಿದ್ದು ಪ್ರತಿಭಾನ್ವಿತೆಯಾಗಿದ್ದಳು.

 

 

Comments are closed.