(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ಕೊರ್ಗಿ ಗ್ರಾಮದ ಕಾಡಿನಬೆಟ್ಟು ಎಂಬಲ್ಲಿ ನಿಂತು ಶಾಲಾ ಬಸ್ಸಿನಲ್ಲಿ ಬರುವ ಮಗನಿಗೆ ಕಾಯುತ್ತಿದ್ದ ಮಹಿಳೆಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಮಾಡಿರುವ ಪ್ರಕರಣ ಆ.5 ರಂದು ನಡೆದಿದ್ದು ಈ ಘಟನೆಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತ್ರಾಸಿ ಹೊಸಾಡು ಗ್ರಾಮದ ಭಾರತ್ ನಗರದ ನಿವಾಸಿ, ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಪ್ರವೀಣ್ (24) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಕೃತ್ಯಕ್ಕೆ ಬಳಸಿರುವ ಬೈಕ್, ಸುಲಿಗೆ ಮಾಡಿರುವ ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ ನಗದು ಹಣ 41 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಶಾಲಾ ಬಸ್ಸಿನಲ್ಲಿ ಬರುವ ತನ್ನ ಮಗನನ್ನು ಕರೆದುಕೊಂಡು ಹೋಗಲು ರಸ್ತೆಯ ಬದಿಯಲ್ಲಿ ನಿಂತಿದ್ದ ಕಾಡಿನಬೆಟ್ಟು ನಿವಾಸಿ ಅಶೋಕ್ ಪೂಜಾರಿ ಎಂಬವರ ಪತ್ನಿ ದೇವಕಿ ಪೂಜಾರಿ (32) ಎನ್ನುವರಿಗೆ ಅಪರಿಚಿತ ವ್ಯಕ್ತಿಯು ತಲೆಗೆ ಕಬ್ಬಿಣದ ರಾಡ್‌ನಿಂದ ಗಂಭೀರ ಹಲ್ಲೆ ಮಾಡಿ 1.60ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ, ಬಳೆ ಮತ್ತು ಉಂಗುರ ಕಳವು ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದ. ಇದರಿಂದ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಾಲಾಗಿದ್ದು ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಎಸ್ಪಿ ಎನ್. ವಿಷ್ಣುವರ್ಧನ್ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ನಿರಂಜನ್ ಗೌಡ ಹಾಗೂ ಸಿಬ್ಬಂದಿಗಳಾದ ರಾಜು ಬಿ., ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆ ದಳದ ರಾಮು ಹೆಗಡೆ ಮತ್ತು ರಾಘವೇಂದ್ರ ಉಪ್ಪುಂದ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಿಸಿ ಕ್ಯಾಮೆರಾದಲ್ಲಿ ಸಿಕ್ಕ ಬೈಕ್ ಸುಳಿವು.!
ಗ್ರಾಮೀಣ ಭಾಗದಲ್ಲಿ ಹಗಲು ಹೊತ್ತಿಗೆ ನಡೆದ ಈ ಸುಲಿಗೆ ಪ್ರಕರಣ ಜನರನ್ನು ಬೆಚ್ಚಿಬೀಳಿಸಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಿದ್ದರು. ಸ್ಥಳೀಯರು ಹೇಳಿದ ಬೈಕ್ ಸುಳಿವು ಹಾಗೂ ಗಾಯಾಳು ಮಹಿಳೆ ಹೇಳಿದ ಆರೋಪಿ ಚಹರೆ ಬೆನ್ನತ್ತಿದ ಪೊಲೀಸರ ತಂಡವು ಹಾಲಾಡಿ ರಸ್ತೆ ಹಾಗೂ ಕುಂದಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದರು. ಈ ವೇಳೆ ಆಯಕಟ್ಟಿನ ಸ್ಥಳಗಳಲ್ಲಿ ಕಂಡು ಬಂದಿರುವ ಸಂಶಯಿತ ಬೈಕ್ ಓಡಾಡಿದ ರಸ್ತೆಯನ್ನು ಕೇಂದ್ರೀಕರಿಸಿಕೊಂಡು ತನಿಖೆ ಮುಂದುವರಿಸಿದ ವಿಶೇಷ ಪೊಲೀಸ್ ತಂಡ ಆ.10ರಂದು ರಾತ್ರಿ ಗಂಗೊಳ್ಳಿ ತ್ರಾಸಿ ಎಂಬಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿ ಕೃತ್ಯ ನಡೆಸುವ ಮೊದಲು ಮೂರ್ನಾಲ್ಕು ದಿನಗಳ ಕಾಲ ಸ್ಥಳಕ್ಕೆ ಬಂದು ಹೋದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಎಲ್ಲವೂ ಬೇರೆಯವರ ಹೆಸರಲ್ಲಿ..!
ಆರೋಪಿ ಕೃತ್ಯಕ್ಕೆ ಮುಂಬದಿ ನಂಬರ್ ಪ್ಲೇಟ್ ಇಲ್ಲದ ಮಾರ್ಪಾಡು ಮಾಡಿದ ಹಂಕ್ ಬೈಕ್ ಉಪಯೋಗಿಸಿದ್ದು ಇದು ಕೂಡ ಬೇರೆಯವರದ್ದಾಗಿದೆ. ಕೀಲಿ ಇಲ್ಲದ ಈ ಬೈಕನ್ನು ಈತ ಆಗಾಗ್ಗೆ ಉಪಯೋಗಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಕದ್ದ ಚಿನ್ನಾಭರಣವನ್ನು ಬೇರೆಯವರ ಹೆಸರಲ್ಲಿ ಸೊಸೈಟಿಯಲ್ಲಿ ಅಡಮಾನ ಇಟ್ಟು ಬಂದ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ಪ್ರವೀಣ್ ಇದಲ್ಲದೆ ಬಹಳಷ್ಟು ಅಪರಾಧ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಹಿನ್ನೆಲೆ ಪೊಲೀಸರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿದೆ ಎಂದು ತಿಳಿದುಬಂದಿದೆ.
Comments are closed.