ಕುಂದಾಪುರ: ಕಳೆದ ಆರು ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿ ಬಳಿಕ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವಕನದ್ದು ಕೊಲೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದ್ದು ಶಂಕರನಾರಾಯಣ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣವನ್ನು ಕೊಲೆ ಪ್ರಕರಣದಡಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ವಿನಯ ಪೂಜಾರಿ ಎನ್ನುವಾತ ಮಾರ್ಚ್ 28 ರಂದು ಆತನ ವಾಸದ ಮನೆ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಚೌಕುಡಿ ಬೆಟ್ಟು ನೆರಂಬಳ್ಳಿ ಎಂಬಲ್ಲಿಂದ ಕಾಣೆಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎ.4 ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿ ವರಾಹಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಆ ಮೃತದೇಹ ವಿನಯ ಪೂಜಾರಿಯನ್ನು ಹೋಲುವ ಬಗ್ಗ ತಿಳಿದ ಸಂಬಂಧಿಕರು ಹಾಗೂ ಊರಿನವರು ಸ್ಥಳಕ್ಕೆ ತೆರಳಿ ನೋಡಿದಾಗ, ಮೃತ ವ್ಯಕ್ತಿ ಕೈ ಮೇಲೆ ಇರುವ ಕಿಚ್ಚ ಸುದೀಪ್ ಎಂದು ಇಂಗ್ಲೀಷನಲ್ಲಿ ಬರೆದಿರುವ ಹಚ್ಚೆ ಹಾಗೂ ಮುಖ ಚಹರೆಯಲ್ಲಿ ಅದು ವಿನಯನ ಮೃತದೇಹ ಎಂದು ಗುರುತಿಸಲಾಗಿತ್ತು. ಈ ಸಾವಿನ ಬಗ್ಗೆ ವಿನಯ್ ಮಾವ ಶೀನ ಪೂಜಾರಿ ಸಂಶಯ ಇರುವುದಾಗಿ ಎ.4ರಂದು ದೂರು ನೀಡಿದ್ದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಭಾವಿಕ ಮರಣ ಪ್ರಕರಣ) ಅಡಿ ಕೇಸ್ ದಾಖಲಾಗಿತ್ತು.
ಇದಾದ ನಂತರ ದೂರುದಾರರು ವಿನಯ ಪೂಜಾರಿ ಸಾವಿನ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪದೇ ಪದೇ ವಿಚಾರ ಮಾಡುತ್ತಿದ್ದುವೈದ್ಯರ ವರದಿ ಬಂದಿರಲಿಲ್ಲ. ಸೆ. 6ರಂದು ಪೊಲೀಸ್ ಠಾಣೆಗೆ ಬಂದು ವಿನಯ ಪೂಜಾರಿ ಇವನ ಸಾವಿನ ವರದಿ ವಿಚಾರಿಸಿದ್ದು ವಿನಯ ಪೂಜಾರಿಯನ್ನು ಯಾರೋ ಕುತ್ತಿಗೆ ಭಾಗಕ್ಕೆ ಬಲವಾಗಿ ಒತ್ತಿರುವುದರಿಂದ (ಹಿಚುಕಿರುವುದರಿಂದ ) ಸಾವು ಸಂಬಂವಿಸಿದೆ ಎಂದು ವೈದ್ಯರ ವರದಿ ಬಂದಿರುವುದು ತಿಳಿದಿದ್ದು ವಿನಯನನ್ನು ಆತನ ಸ್ನೇಹಿತನಾದ ಹುಣ್ಸೆಕಟ್ಟೆ ಹೊಸ ತೊಪ್ಪಲುವಿನ ಅಕ್ಷಯ ಮಾ. 28 ರಂದು ದೂರುದಾರರ ಮನೆಯ ಬಳಿ ಬಂದು ಮನೆಯಲ್ಲಿ ಇದ್ದ ವಿನಯ ಪೂಜಾರಿ ಯವರನ್ನು ಕರೆದುಕೊಂಡು ಹೋಗಿದ್ದು , ಅಕ್ಷಯ ಹಾಗೂ ಆತನ ಸ್ನೇಹಿತರು ಸೇರಿ ಕುತ್ತಿಗೆ ಭಾಗಕ್ಕೆ ಬಲವಾಗಿ ಹಿಚುಕಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಕ್ಷಯ್ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಯಿದ್ದು ಶಂಕರನಾರಾಯಣ ಠಾಣೆಗೆ ಪೊಲೀಸ್ ಆಧಿಕಾರಿಗಳು ಭೇಟಿ ನೀಡಿದ್ದಾರೆ.
Comments are closed.