ಕರ್ನಾಟಕ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಮತಾಂತರ ನಿಷೇಧ ವಿಧೇಯಕ ವಿಧಾನ ಪರಿಷತ್ ನಲ್ಲಿ ಅಂಗೀಕಾರ

Pinterest LinkedIn Tumblr

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ವಿಧೇಯಕವನ್ನು ಗುರುವಾರ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಗಿದೆ.

ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ಮತಾಂತರ ನಿಷೇಧ ಕಾಯ್ದೆಯನ್ನು ನಿನ್ನೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನ ಪರಿಷತ್ ನಲ್ಲಿ ಮಂಡಿಸಿದರು.

ವಿಧೇಯಕ ಮಂಡಿಸಿ ಮಾತನಾಡಿದ ಅರಗ ಜ್ಞಾನೇಂದ್ರ ಅವರು, ಇದು ಮಹತ್ವದ ಕಾಯ್ದೆ. ಪರಿಸ್ಥಿತಿ ಎಲ್ಲರಿಗೂ ಅರಿವಿದೆ. 2013ರಲ್ಲಿ ಕಾಂಗ್ರೆಸ್ ಸರ್ಕಾರವು ಈ ಕಾಯ್ದೆ ಕುರಿತು ಚಿಂತನೆ ನಡೆಸಿತ್ತು. ಸಂವಿಧಾನದ ವಿಧಿ 25ರ ಪ್ರಕಾರ ಎಲ್ಲರಿಗೂ ತಮ್ಮ ಧಾರ್ಮಿಕ ನಂಬಿಕೆ ಹಾಗೂ ಧರ್ಮದಲ್ಲಿ ಬದುಕುವ ಹಕ್ಕಿದೆ ಎಂದರು.

ಯಾರ ಧಾರ್ಮಿಕ ಸ್ವಾತಂತ್ರ್ಯವನ್ನು ಈ ಕಾಯ್ದೆ ಕಸಿಯುವುದಿಲ್ಲ. ಬಲ ಪ್ರಯೋಗ, ದುರ್ಮಾರ್ಗದಲ್ಲಿ ಮತಾಂತರ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮತಾಂತರಕ್ಕೆ ಅಡ್ಡಿ ಇಲ್ಲ. ಆದರೆ ಆಮಿಷ, ಬಲವಂತವಾಗಿ ಅದು ನಡೆಯಬಾರದು ಎಂಬ ಕಾರಣಕ್ಕೆ ವಿಧೇಯಕ ರೂಪಿಸಲಾಗಿದೆ ಎಂದರು

ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಈ ಮಸೂದೆ ಅಸಂವಿಧಾನಿಕವಾಗಿದ್ದು, ಧಾರ್ಮಿಕ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

ನಂತರ ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು ವಿಧೇಯಕವನ್ನು ಮತಕ್ಕೆ ಹಾಕಿದರು. ಈ ವೇಳೆ ಬಿ ಕೆ ಹರಿಪ್ರಸಾದ್ ಅವರು ವಿಧೇಯಕದ ಪ್ರತಿಯನ್ನು ಹರಿದು ಹಾಕಿ ಪ್ರತಿಭಟಿಸಿದರು.

Comments are closed.