ಬೆಂಗಳೂರು: ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸರ್ಕಾರಿ ಉದ್ಯೋಗ ವಂಚಿತರ ಪರವಾಗಿ ಮಾತನಾಡಿದ ಅವರು ಬಿಜೆಪಿಯ ಭ್ರಷ್ಟ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ‘ಸರ್ಕಾರಿ ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಬೆಳೆಗಳ ಗಂಟನ್ನು ನನ್ನ ಕೈಗಿತ್ತು ಸರ್ಕಾರಕ್ಕೆ ತಲುಪಿಸಿ, ಉದ್ಯೋಗ ಕೊಡಿಸಿ ಎಂದು ಕೋರಿದ್ದಾರೆ. ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ನಿರೀಕ್ಷೆಯಿಟ್ಟುಕೊಂಡು, ವರ್ಷಗಟ್ಟಲೆ ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿಯೂ ಆಳುವ ಸರ್ಕಾರದ ಅಕ್ರಮದ ಕಾರಣಕ್ಕೆ ಉದ್ಯೋಗ ವಂಚಿತರಾದಾಗ ಆಗುವ ನೋವು, ಹತಾಶೆ, ಸಂಕಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’.
‘ರಾಜ್ಯ ಸರ್ಕಾರ ಇನ್ನಾದರೂ ಪಾರದರ್ಶಕ ನೇಮಕಾತಿ ನಡೆಸಿ, ಪ್ರಾಮಾಣಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು, ಇಲ್ಲದಿದ್ದರೆ ಯುವ ಜನರ ಆಕ್ರೋಶದ ಅಲೆಗೆ ಬಿಜೆಪಿಯ ಭ್ರಷ್ಟ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ’ ಎಂದು ಬರೆದಿದ್ದಾರೆ.
Comments are closed.