ಕರ್ನಾಟಕ

ಬಿಜೆಪಿಯದ್ದು ಭ್ರಷ್ಟ ಸರ್ಕಾರ ಮಾತ್ರವಲ್ಲ, ಇದೊಂದು ಹೇಡಿ ಸರ್ಕಾರ: ವಿಪಕ್ಷ ನಾಯಕ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ವಿಧಾನಮಂಡಲದಲ್ಲಿ ನಮ್ಮನ್ನು ಎದುರಿಸಲಾಗದೆ ನಮಗೆ ಚರ್ಚೆಗೂ ಅವಕಾಶ ನೀಡದೆ ಅವಸರದಲ್ಲಿ ಅಧಿವೇಶನವನ್ನು ಕೊನೆಗೊಳಿಸಿದ್ದಾರೆ, ಜೊತೆಗೆ ಅಧಿವೇಶನವನ್ನು ವಿಸ್ತರಣೆ ಮಾಡಿ ಎಂಬ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಇದು ಭ್ರಷ್ಟ ಸರ್ಕಾರ ಮಾತ್ರ ಅಲ್ಲ, ಇದೊಂದು ಹೇಡಿ ಸರ್ಕಾರ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಸರಿಯಾಗಿ ತನಿಖೆ ನಡೆಸಿದರೆ ಕೆಲವು ಸಚಿವರೂ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ಜೈಲು ಪಾಲಾಗಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರವೇ ತನಿಖೆಯ ಹಾದಿ ತಪ್ಪಿಸುತ್ತಿದೆ. ಈಗಾಗಲೇ ನಾಲ್ವರು ಸಚಿವರ ಹೆಸರು ಕೇಳಿಬಂದಿದೆ. ಬಿಜೆಪಿಯ ಇನ್ನೊಬ್ಬ ಶಾಸಕ ಬಸವರಾಜ ದಡೆಸುಗೂರ್ ಲಂಚ ಪಡೆದು ಸರ್ಕಾರಕ್ಕೆ ನೀಡಿದ್ದೇನೆ ಎಂದು ಹೇಳಿದ ಆಡಿಯೋ ಸಾಕ್ಷಿ ಇದೆ. ಇದರ ಮೇಲೆ ಪತ್ರಿಕೆಗಳು ವರದಿ ಮಾಡಿವೆ, ಸಂಪಾದಕೀಯ ಬರೆದಿವೆ. ನಡೆದಿರುವ ಭ್ರಷ್ಟಾಚಾರಕ್ಕೆ ಇನ್ನೇನು ಸಾಕ್ಷಿ ಬೇಕು.

ಶಾಸಕ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿಳ ಮಗನೇ ಹಗರಣದಲ್ಲಿ ಷಾಮೀಲಾಗಿದ್ದಾನೆ ಎಂದು ನೇರ ಆರೋಪ ಮಾಡಿದ್ದಾರೆ. ಅವರನ್ನು ಕರೆದು ವಿಚಾರಣೆಗೆ ಒಳಪಡಿಸುವ ಧೈರ್ಯ ಇದೆಯೇ?. ಕೇವಲ ಅಧಿಕಾರಿಗಳನ್ನು ಮತ್ತು ಸಣ್ಣಪುಟ್ಟ ರಾಜಕಾರಣಿಗಳನ್ನು ಬಂಧಿಸಲಾಗಿದೆ. ಸತ್ಯ ಹೊರಬರಬೇಕಾದರೆ ಬಂಧಿತ ಅಧಿಕಾರಿ ಅಮೃತ್ ಪೌಲ್ ಅವರ ಹೇಳಿಕೆಯನ್ನು ನಿಯಮ 164ರಡಿಯಲ್ಲಿ ಪಡೆಯಬೇಕು ಮತ್ತು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತೇನೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು 6-7-2021ರಲ್ಲಿ ಪ್ರಧಾನಿಗಳಿಗೆ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದರು, ಯಡಿಯೂರಪ್ಪ ಅವರಿಂದ ಹಿಡಿದು ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿಸಿ ಪಾಟೀಲರ ವರೆಗೆ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಯಾರೂ ಅವರ ಮಾತು ಕೇಳಿಲ್ಲ.
ಮುಖ್ಯಮಂತ್ರಿಗಳು ಒಂದು ಸಭೆ ಕರೆದು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಹುಸಿ ಭರವಸೆಯನ್ನು ಗುತ್ತಿಗೆದಾರರಿಗೆ ನೀಡಿದ್ದು ಬಿಟ್ಟರೆ ಕಮಿಷನ್ ಕಿರುಕುಳ ಇಂದಿಗೂ ಹಾಗೆಯೇ ಇದೆ.

ಈ ಸರ್ಕಾರದಲ್ಲಿ ಕಮಿಷನ್ ದಂಧೆ ಎಷ್ಟು ಮಿತಿಮೀರಿದೆ ಎಂದರೆ 5% ಪ್ರಾಜೆಕ್ಟ್ ಅನುಮೋದನೆಗೆ, 2% ಎಂಪಿಗಳಿಗೆ, 10% ಶಾಸಕರಿಗೆ, 5% ಸ್ಥಳೀಯ ಜನಪ್ರತಿನಿಧಿಗಳಿಗೆ, ಹಣ ಬಿಡುಗಡೆಗೆ 5 ರಿಂದ 8% ಲಂಚಕೊಡಬೇಕು.

ಗುತ್ತಿಗೆದಾರರ ಲಾಭ 20%, ಜಿಎಸ್‌ಟಿ 15%, ಕೊನೆಗೆ ಕಾಮಗಾರಿಗೆ ಉಳಿಯೋದು ಕೇವಲ 20% ಹಣ, ಈ 20% ಹಣದಲ್ಲಿ ಗುಣಮಟ್ಟದ ಕೆಲಸ ನಿರೀಕ್ಷೆ ಮಾಡೋಕೆ ಸಾಧ್ಯವೇ? ಇಷ್ಟೆಲ್ಲಾ ಆರೋಪ ಇದ್ದರೂ ಮುಖ್ಯಮಂತ್ರಿಗಳಿಗೆ ಸಾಕ್ಷಿ ಬೇಕಂತೆ.

ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ಅಗತ್ಯ ದಾಖಲೆ ಒದಗಿಸುತ್ತೇವೆ. ನಾವು ಮಾಡಿರುವ ಆರೋಪವನ್ನು ಸಾಬೀತು ಮಾಡಲು ಸಾದ್ಯವಾಗಿಲ್ಲ ಎಂದರೆ ಕಾನೂನು ಪ್ರಕಾರ ಶಿಕ್ಷೆ ಎದುರಿಸಲು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.
ಅವರ ಈ ಸವಾಲು ಸ್ವೀಕರಿಸಿ, ನ್ಯಾಯಾಂಗ ತನಿಖೆಗೆ ಒಪ್ಪಿಸಿ.

ಕೆಂಪಣ್ಣ ನನ್ನನ್ನು ಮೊದಲ ಬಾರಿ ಭೇಟಿಯಾದದ್ದು 24-8-2022ರಂದು, ಅದಕ್ಕೂ ಮೊದಲು ಅವರು ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ 40% ಕಮಿಷನ್ ಬಗ್ಗೆ ಪತ್ರ ಬರೆದಿದ್ದರು, ಆದರೂ ಬೊಮ್ಮಾಯಿ ಅವರು ಕೆಂಪಣ್ಣನವರನ್ನು ಸಿದ್ದರಾಮಯ್ಯ ಅವರ ಏಜೆಂಟ್ ಎಂದು ಕರೆದಿದ್ದಾರೆ. ಕೆಂಪಣ್ಣನವರ ಪ್ರಕಾರ ಆರೋಗ್ಯ, ವೈದ್ಯಕೀಯ ಶಿಕ್ಷಣ, ಲೋಕೋಪಯೋಗಿ, ಬೃಹತ್ ಮತ್ತು ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ವ್ಯಾಪಕವಾಗಿ ಕಮಿಷನ್ ದಂಧೆ ನಡೆಯುತ್ತಿದೆ.
ಸಚಿವರಾದ ಮುನಿರತ್ನ ಮತ್ತು ಸುಧಾಕರ್ ಹೆಸರನ್ನು ಹೇಳಿದ್ದಾರೆ.

2008ರಿಂದ 2013ರ ವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತು ಈಗಿನ ಮೂರು ವರ್ಷಗಳ ಅವಧಿಯಲ್ಲಿ ಒಂದು ಪ್ರಕರಣವನ್ನೂ ಸರ್ಕಾರ ತನಿಖೆಗಾಗಿ ಸಿಬಿಐ ಗೆ ವಹಿಸಿಲ್ಲ. ಪಿಎಸ್ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ನಾನು ಒತ್ತಾಯ ಮಾಡಿದ್ದೆ, ಆದರೂ ಸರ್ಕಾರ ಒಪ್ಪಿಲ್ಲ.
ಈಗ ಬಿಜೆಪಿ ಪಕ್ಷದವರು ನನ್ನ ವಿರುದ್ಧ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಬಿಜೆಪಿಯವರು ಹಿಂದಿನ 3 ವರ್ಷಗಳ ಕಾಲ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರ?

ಬಿಜೆಪಿಯವರು ರೀಡೂ ಬಗ್ಗೆ ಇಲ್ಲಸಲ್ಲದ ಮಾತಾಡುತ್ತಾರೆ. ರೀಡೂ ಮಾಡಿ ಎಂದು ಹೇಳಿದ್ದು ರಾಜ್ಯ ಹೈಕೋರ್ಟ್. ಸಿದ್ದರಾಮಯ್ಯನವರು ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ ಕೆಂಪಣ್ಣನವರ ಆಯೋಗದ ವರದಿ ಹೇಳಿದೆ.
ಹೀಗಿದ್ದಾಗ ಹಗರಣದ ಮಾತು ಎಲ್ಲಿ?
ರೀಡೂ ಬಗ್ಗೆ ಪರಿಶೀಲನೆಗಾಗಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿಗಳಾದ ಕೇಶವ ನಾರಾಯಣ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದರು. ಸಂದೀಪ್ ಧವೆ (ನಿವೃತ್ತ ಐಎಎಸ್ ಅಧಿಕಾರಿ) ಹಾಗೂ ಮೇಘರಿಕ್ ( ನಿವೃತ್ತ ಐಪಿಎಸ್ ಅಧಿಕಾರಿ) ಅವರು ಈ ಸದಸ್ಯರಾಗಿದ್ದಾರೆ.

ಡಿ.ಕೆ.ರವಿ, ಡಿವೈಎಸ್‌ಪಿ ಗಣಪತಿ ಹಾಗೂ ಅನುರಾಗ್ ತಿವಾರಿ ಆತ್ಮಹತ್ಯೆ, ಅಕ್ರಮ ಲಾಟರಿ ಪ್ರಕರಣ, ಪರೇಶ್ ಮೇಸ್ತಾ ಸಾವು, ಸೌಜನ್ಯ ಮತ್ತು ಎಂ.ಎಂ.ಕಲಬುರ್ಗಿ ಕೊಲೆ ಪ್ರಕರಣ ಹಾಗೂ ರಾಮನಗರ-ಮಂಡ್ಯ ನಗರಾಭಿವೃದ್ದಿ ಪ್ರಕರಣದ ಅವ್ಯವಹಾರ ಸೇರಿದಂತೆ ಎಂಟು ಪ್ರಕರಣಗಳನ್ನು ನಾವು ಸಿಬಿಐ ತನಿಖೆಗೆ ಒಪ್ಪಿಸಿದ್ದೆವು.

ನಾನಾಗಲೀ, ನಮ್ಮ ಸರ್ಕಾರದ ಸಚಿವರಾಗಲೀ ಯಾವ ತಪ್ಪು ಮಾಡಿಲ್ಲ ಎಂಬ ಧೈರ್ಯದಿಂದಲೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಆರೋಪ ಬಂದ ಕೂಡಲೆ ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದು.
ಬಿಜೆಪಿ ಸರ್ಕಾರಕ್ಕೆ ಈ ಧೈರ್ಯ ಇದೆಯೇ?

ಸುಳ್ಳೇ ಬಿಜೆಪಿಯವರ ಮನೆ ದೇವರು. ಇಂತಹ ಸುಳ್ಳುಗಳ ಕಂತೆಯನ್ನು ಸೇರಿಸಿ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕ ತಂದಿದ್ದಾರೆ. ಈಗ ಇಡೀ ದೇಶ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಈ ಅವಮಾನದಿಂದ ತಪ್ಪಿಸಿಕೊಳ್ಳಲು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ನಮ್ಮ ಸರ್ಕಾರದ ಕಾಲದಲ್ಲಿ ಹಗರಣಗಳು ನಡೆದಿದ್ದರೆ ಬಿಜೆಪಿ ಪಕ್ಷವೇ ವಿರೋಧ ಪಕ್ಷದಲ್ಲಿತ್ತು, ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇತ್ತು. ಸಿಬಿಐ, ಇಡಿ, ಐಟಿ ಎಲ್ಲವೂ ಇವರ ಕೈಯಲ್ಲಿಯೇ ಇತ್ತಲ್ಲಾ, ಆಗ ಇವರೇನು ಕತ್ತೆ ಕಾಯುತ್ತಿದ್ರಾ? ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ “ದಮ್ ಇದ್ದರೆ, ತಾಕತ್ ಇದ್ದರೆ” ನಮ್ಮ ಮೇಲೆ ನೀವು ಮಾಡಿರುವ ಆರೋಪ ಮತ್ತು ನಿಮ್ಮ ಸರ್ಕಾರದ ಮೇಲಿನ ನಮ್ಮ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿ.

ಈ ಹಿಂದಿನ 12 ಮಂದಿ ಶಿಕ್ಷಕರ ಅಕ್ರಮ ನೇಮಕಾತಿ ಬಗ್ಗೆ ಶಾಸಕ ರಾಜೀವ್ ಆರೋಪ ಮಾಡಿದ್ದಾರೆ. ಇವರಲ್ಲಿ 3 ಜನ ನಮ್ಮ ಕಾಲದಲ್ಲಿ ನೇಮಕವಾಗಿದ್ದು, ಉಳಿದ ಶಿಕ್ಷಕರಿಗೆ ನೇಮಕಾತಿ ಪತ್ರ ಸಿಕ್ಕಿದ್ದು ಬಿಜೆಪಿ ಮತ್ತು ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಕಾಲದಲ್ಲಿ. ಈ ಬಗ್ಗೆಯೂ ನ್ಯಾಯಾಂಗ ತನಿಖೆ ನಡೆಸಿ.
ನಮ್ಮ ಸರ್ಕಾರದ ಕಾಲದಲ್ಲಿ 35,000ಕ್ಕೂ ಮಿಕ್ಕಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಮಾಡಿದ್ದೆವು. ಇದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಶ್ಲಾಘಿಸಿದ್ದರು. ಇದಕ್ಕಾಗಿ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವಿಶೇಷ ಪ್ರಶಸ್ತಿ ನೀಡಿತ್ತು.

ಈ ಬಾರಿ ವಿಧಾನಸಭೆಯಲ್ಲಿ ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಇದನ್ನು ಇಲ್ಲಿಗೆ ಬಿಡಲ್ಲ. ಈಗಾಗಲೇ 40% ಕಮಿಷನ್ ಕುರಿತು ಅಭಿಯಾನ ಆರಂಭ ಮಾಡಿದ್ದೇವೆ. ಜನರ ಬಳಿಗೆ ಹೋಗಿ ಸತ್ಯ ಹೇಳುತ್ತೇವೆ. ಜನ ಮುಂದಿನ ಚುನಾವಣೆಯಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ ಎಂದವರು ಹೇಳಿದ್ದಾರೆ.

Comments are closed.