ಉಡುಪಿ: ಜಿಲ್ಲೆಯ ಆಧ್ಯಾತ್ಮಿಕ, ಧಾರ್ಮಿಕ ತಳಗಟ್ಟಿನಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಸ ಪೀಳಿಗೆಗೆ ಪರಿಚಯಿಸಿ ರಾಷ್ಟ್ರಮಟ್ಟಕ್ಕೆ ವಿಸ್ತರಿಸಬೇಕು ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಬೈಂದೂರು ತಾಲೂಕು ಆಡಳಿತದ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಗೂರು ಶ್ರೀಗೋಪಾಲಕೃಷ್ಣ ಕಲಾಮಂದಿರದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
1997 ರಲ್ಲಿ ಘೋಷಣೆಯಾದ ಹೊಸ ಜಿಲ್ಲೆಗಳ ನಡೆದಿರುವ ಅಭಿವೃದ್ದಿಗೆ ಹೋಲಿಸಿದಲ್ಲಿ, ಉಡುಪಿ ಜಿಲ್ಲೆ 20 ವರ್ಷ ಮುಂದಿದ್ದು, ಸ್ಟಾರ್ಟಪ್ ಇಂಡಿಯಾ ಯೋಜನೆಯಡಿ ಹೊಸ ಹೊಸ ಆವಿಷ್ಕಾರ, ಉದ್ಯಮ ಸ್ಥಾಪನೆ ಹೆಚ್ಚಬೇಕು. ಮುಂದಿನ 25ವರ್ಷಗಳ ಅಭಿವೃದ್ಧಿ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಂದ ನೀಲನಕಾಶೆ ತಯಾರಿಸಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಭೇಧ ಮರೆತು ಎಲ್ಲರೂ ಒಂದಾಗಬೇಕು. ಉಡುಪಿ ಜಿಲ್ಲೆಗೊಂದು ವಿಮಾನ ನಿಲ್ದಾಣ, ಸರಕಾರಿ ವೈದ್ಯಕೀಯ ಕಾಲೇಜು, ಕೃಷಿ ಕಾಲೇಜು, ಇಎಸ್‍ಐ ಆಸ್ಪತ್ರೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಜನ ಸಂಪರ್ಕದ ಅಭಿವೃದ್ಧಿ ಅಗತ್ಯವಿದೆ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ 2,000ಕೋಟಿ ರೂ. ಅನುದಾನವನ್ನು ಸರಕಾರದಿಂದ ತಂದು ತೊಡಗಿಸಿದ್ದು ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ಉಡುಪಿ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಪ್ರತಿಪಾದಿಸಿದರು. ಭಕ್ತರು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಮೂಲಭೂತ ಸೌಲಭ್ಯಗಳ ಮತ್ತಷ್ಟು ಅಭಿವೃದ್ಧಿಯ ಅಗತ್ಯವಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್ ಆರ್. ಹೆಗ್ಡೆ, ಜಿಲ್ಲಾಕಾರಿ ಕೂರ್ಮಾ ರಾವ್ ಎಂ., ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರಸನ್ನ ಎಚ್., ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಗೀತಾ, ಬೈಂದೂರು ತಹಸೀಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ, ಬೈಂದೂರು ತಾ. ಪಂ. ಕಾರ್ಯನಿರ್ವಹಣಾಕಾರಿ ಭಾರತಿ ಉಪಸ್ಥಿತರಿದ್ದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಸ್ವಾಗತಿಸಿದರು.
ವಿಶ್ವನಾಥ ಶೆಟ್ಟಿ, ಸುಧಾಕರ ಪಿ. ನಿರೂಪಿಸಿದರು. ಕರುಣಾಕರ ಶೆಟ್ಟಿ ವಂದಿಸಿದರು. ಕುಂದಾಪುರದ ಬಿ. ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
Comments are closed.