ಕುಂದಾಪುರ: ಮಹಿಳೆಯರು ಸಬಲರಾದರೆ ಸಂಘ-ಸಂಸ್ಥೆ ಹಾಗೂ ದೇಶ ಉನ್ನತ ಸ್ಥಾನದತ್ತ ಹೋಗುತ್ತದೆ. ಇಂದು ದೇಶದ ವಿವಿದೆಡೆ ಎಲ್ಲಾ ಸ್ಥರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಯುವತಿಯರು ಗಣನೀಯ ಸಾಧನೆ ಮಾಡುತ್ತಿರುವುದು ಈ ಮಣ್ಣಿನ ವೈಶಿಷ್ಟ್ಯತೆ ಹಾಗೂ ತಂದೆತಾಯಿ ಕಲಿಸಿದ ಸಂಸ್ಕಾರದಿಂದ ಸಾಧ್ಯವಿದೆ ಎಂದು ಮುಂಬಯಿ ಬಿಲ್ಲವ ಛೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಚೇರ್ ಮೆನ್ ಎನ್.ಟಿ ಪೂಜಾರಿ ಹೇಳಿದರು.
ಕುಂದಾಪುರ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ಬಿಲ್ಲವ ಮಹಿಳಾ ಘಟಕದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಒಳಿತಿಗಾಗಿ ಮಾಡುವ ಸಂಘಟನೆಯಲ್ಲಿ ಯಾವುದೇ ರಾಜಕೀಯ ಇರಬಾರದು. ಸಂಘಸಂಸ್ಥೆಯಲ್ಲಿ ಎಲ್ಲಾ ಪಕ್ಷದವರು ಇರುತ್ತಾರೆ. ರಾಜಕೀಯ ರಹಿತವಾಗಿ ಕೆಲಸ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು. ಮಾತ್ರವಲ್ಲದೆ ಸಂಘಟನೆ ನಿಂತ ನೀರಾಗದೆ ಸದಾ ಚಲನೆಯಲ್ಲಿದ್ದು ಸಕ್ರೀಯವಾಗಬೇಕು. ಸಂಘಟನೆಯ ಅಧ್ಯಕ್ಷರಾದವರಿಗೆ ಸಾಧಿಸುವ ಛಲವಿರಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಸಾಲಿನ ಅಧ್ಯಕ್ಷರು, ಪದಾಧಿಕಾರಿಗಳ ಸಹಿತ ಯುವ ಹಾಗೂ ಮಹಿಳಾ ಘಟಕ ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರು.
ಕುಂದಾಪುರದ ಬಿಲ್ಲವ ಮಹಿಳಾ ಘಟಕಾಧ್ಯಕ್ಷೆ ಸುಮನ ಬಿದ್ಕಲಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಕರ್ಕಿ ಗ್ರೀನ್ ಲ್ಯಾಂಡ್ ಟೈಲ್ಸ್ ಲಿ. ನಿರ್ದೇಶಕಿ ಯಶೋಧ ಎನ್. ಪೂಜಾರಿ, ಸಾಮಾಜಿಕ ಕಾರ್ಯಕರ್ತೆ ವೈಶಾಲಿ ಕೋಟ್ಯಾನ್, ಉಡುಪಿ ನೇತ್ರಜ್ಯೋತಿ ಕಾಲೇಜಿನ ಉಪನ್ಯಾಸಕಿ ಮಂಜುಳಾ ತೆಕ್ಕಟ್ಟೆ, ಕುಂದಾಪುರ ಬಿಲ್ಲವ ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ಗುಣರತ್ನಾ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ರಂಗನಹಿತ್ಲು ಇದ್ದರು.
ಬಿಲ್ಲವ ಮಹಿಳಾ ಘಟಕದ ಕೋಶಾಧಿಕಾರಿ ಗಿರಿಜಾ ಮಾಣಿಗೋಪಾಲ್ ಸ್ವಾಗತಿಸಿದರು. ಗುಲಾಬಿ ಪೂಜಾರಿ ವರದಿ ವಾಚಿಸಿದರು. ಭಾಸ್ಕರ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿ, ಸುನೇತ್ರಾ ಸತೀಶ್ ಕೋಟ್ಯಾನ್ ವಂದಿಸಿದರು.
Comments are closed.