(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರಿಂದ ಜೆಟ್ಟಿ ಭಾಗ ಕುಸಿತಕ್ಕೊಳಗಾದ ಘಟನೆ ಬುಧವಾರ ಸಂಜೆಯಿಂದ ನಡೆಯುತ್ತಿದೆ. 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು ಮೀನುಗಾರರು ತೀವೃ ಆತಂಕಕ್ಕೀಡಾಗಿದ್ದಾರೆ. ಸಂಜೆ 5.30 ರ ಹೊತ್ತಿಗೆ ಘಟನೆ ನಡೆದು ನಿರಂತರವಾಗಿ ಕುಸಿತವಾಗುತ್ತಿದ್ದರೂ ಕೂಡ ಸಂಬಂದಪಟ್ಟವರ್ಯಾರು ಇತ್ತ ಕಡೆ ತಲೆ ಹಾಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಳೆದ 13 ವರ್ಷದ ಹಿಂದೆ ಗಂಗೊಳ್ಳಿ ಜೆಟ್ಟಿ ನಿರ್ಮಾಣವಾಗಿದ್ದು ಈ ಹಳೆ ಜೆಟ್ಟಿ ಕೂಡ ಕುಸಿತಕ್ಕೊಳಗಾಗಿತ್ತು. ಬಳಿಕ ಶಿವಮೊಗ್ಗ ಸಂಸದ ಹಾಗೂ ಬೈಂದೂರು ಶಾಸಕರ ಮುತುವರ್ಜಿಯಲ್ಲಿ 12 ಕೋಟಿ ಅನುದಾನ ನೂತನ ಜೆಟ್ಟಿ ಕಾಮಗಾರಿಗೆ ಮಂಜೂರಾಗಿ 180 ಮೀಟರ್ ಕೆಲಸ ಕೂಡ ನಡೆದಿತ್ತು. ಮುಂದಿನ ಕಾಮಗಾರಿಗಾಗಿ ಹಳೆ ಜೆಟ್ಟಿಯ ಡಯಪ್ರಮ್ ಹಾಲ್ ನಡುವೆಯಿದ್ದ ರಾಡ್ ತುಂಡರಿಸಿ ಹೊಸ ಪಿಲ್ಲರ್ ಹಾಕಿದ್ದು ಎರಡಕ್ಕೂ ಕೊಂಡಿಯಾಗಿದ್ದ ರಾಡು ತುಂಡರಿಸಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಹಳೆ ಜೆಟ್ಟಿ ಕುಸಿತಕ್ಕೊಳಗಾಗಿ ಈಗ ನಡೆಯುತ್ತಿರುವ ಕಾಮಗಾರಿಗಾಗಿ ಮಾಡಿದ ಪಿಲ್ಲರ್ ಮೇಲೆ ಬಿದ್ದು ಹಲವು ಪಿಲ್ಲರ್ ಕುಸಿದಿದೆ ಎನ್ನುತ್ತಾರೆ ಮೀನುಗಾರರು.
ಅಧಿಕಾರಿಗಳ ಬೇಜವಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಇದು ಎಂದು ಮೀನುಗಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ 40 ದೊಡ್ಡ ಬೋಟುಗಳು, 100ಕ್ಕೂ ಅಧಿಕ ಟ್ರಾಲ್ ಬೋಟುಗಳು, ಸಿಂಗಲ್ ಬೋಟುಗಳು, ನೂರಾರು 370 ಬೋಟುಗಳು, 300ಕ್ಕೂ ಅಧಿಕ ನಾಡ ದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮೀನು ಖಾಲಿ ಮಾಡಲು ದೂರದ ಭಟ್ಕಳ ಮೊದಲಾದೆಡೆ ತೆರಳಬೇಕಾದ ಅನಿವಾರ್ಯತೆ ಮೀನುಗಾರರದ್ದು. ಮೀನು ಕಾರ್ಮಿಕರು ಅತಂತ್ರರಾಗಿದ್ದಾರೆ. ಹೀಗೆ ಮುಂದುವರಿದರೆ ಇನ್ನು ಒಂದೆರಡು ವರ್ಷ ಅತಂತ್ರತೆ ಜೊತೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ನಿಶ್ಚಿತ ಎನ್ನುತ್ತಾರೆ ಮೀನುಗಾರರು. ಮೀನುಗಾರರ ಜೀವ-ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರವೊದಗಿಸಿ ಮೀನುಗಾರರು ಬದುಕು ಕಟ್ಟಿಕೊಳ್ಳಲು ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ನಿಶ್ಚಿತ ಎಂದು ಗಂಗೊಳ್ಳಿಯ ಹಸಿ ಮೀನು ವ್ಯಾಪಾರಸ್ಥರ ಸಂಘದವರು ಎಚ್ಚರಿಕೆ ನೀಡಿದ್ದಾರೆ.
Comments are closed.