ಕುಂದಾಪುರ: ಕೋಲಾರ, ಕೊಪ್ಪಳದಲ್ಲಿ ನಡೆದ ಅಸ್ಪೃಶ್ಯತೆ ಘಟನೆ ಅತ್ಯಂತ ಕ್ರೌರ್ಯವಾದುದು. ಇದು ಹೇಯ ಕೃತ್ಯ. ಇಂತಹವರಿಗೆ ಕಠಿನ ಶಿಕ್ಷೆ ಕೊಡಬೇಕು. ನಾವು ಅಸ್ಪೃಶ್ಯತೆ ವಿರುದ್ಧ ಕಳೆದೆರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಇನ್ನೂ ಅಂಬೇಡ್ಕರ್ ಅವರ ಕನಸು ನನಸಾಗದಿರುವುದು ದುರಂತ
ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಶನಿವಾರ ಕುಂದಾಪುರದ ಶೇರೊನ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಘೋಷಿಸಿದಂತೆ ಕೆಲಸ ನೀಡಿರುವುದು ಸ್ವಾಗತಾರ್ಹ. ಆದರೆ ಅವರಿಗೆ ಪುತ್ತೂರು ಅಥವಾ ಜಿಲ್ಲೆಯೊಳಗೆ ನೀಡಬೇಕು ಹಾಗೂ ಗುತ್ತಿಗೆ ಬದಲು ಖಾಯಂ ಮಾಡಬೇಕು. ಅದೇ ರೀತಿ ಮತಾಂಧರಿಂದ ಕೊಲೆಗೀಡಾಗಿರುವ ಪರೇಶ್ ಮೇಸ್ತ, ಹರ್ಷ ಹಾಗೂ ರುದ್ರೇಶ್ ಅವರ ಕುಟುಂಬಗಳಿಗೂ ಆಧಾರವಾಗಿರುವಂತಹ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಪಿಎಫ್‌ಐ ನಿಷೇಧಿಸಿರುವುದು ಕೇಂದ್ರ ಸರಕಾರದ ಯೋಗ್ಯ ನಿರ್ಧಾರ. ದೇಶದ ಸುರಕ್ಷತೆ ವಿಚಾರದಲ್ಲಿ ರಾಜಿಯಿಲ್ಲ ಎನ್ನುವ ಸಂದೇಶವನ್ನು ಮೋದಿ ಸರಕಾರ ಕೊಟ್ಟಿದೆ. ಕೊಲೆ, ಸುಲಿಗೆ, ಗಲಭೆಗಳು ಪಿಎಫ್‌ಐ, ಎಸ್‌ಡಿಪಿಐನಿಂದ ಆಗುತ್ತಿದ್ದು, ಅದಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಇದು ಅಗತ್ಯವಿತ್ತು. ಬ್ಯಾನ್ ಪಿಎಫ್‌ಐ ವಿಚಾರದಲ್ಲಿ ಕಳೆದ 15 ವರ್ಷಗಳಿಂದ ಶ್ರೀ ರಾಮ ಸೇನೆ ಹೋರಾಟ ಮಾಡುತ್ತಿತ್ತು. ಅದಕ್ಕೀಗ ಬಲ ಸಿಕ್ಕಿದೆ. ಇನ್ನೂ ಆಳವಾಗಿ, ವಿಸ್ತಾರವಾಗಿ ಬೇರು ಬಿಟ್ಟಿರುವ ದೇಶ ದ್ರೋಹಿ ಸಂಘಟನೆಗಳನ್ನು ಮಟ್ಟಹಾಕುವ ಪ್ರಕ್ರಿಯೆ ಆಗಬೇಕಿದೆ. ಆ ನೆಲೆಯಲ್ಲಿ ಸಾಕಷ್ಟು ಮಾಹಿತಿ ನನ್ನ ಬಳಿಯಿದ್ದು, ಗೃಹ ಸಚಿವರಿಗೆ ಕೊಡಲಾಗುವುದು. ಅವರ ಜಾಲ ದೊಡ್ಡದು, ಕಟ್ಟುನಿಟ್ಟಾಗಿ ಸರಿಯಾಗಿ, ಪೂರ್ಣಪ್ರಮಾಣದಲ್ಲಿ ಮಟ್ಟಹಾಕಬೇಕಿದೆ ಎಂದರು.
ಕುಂದಾಪುರದ ಪುರಸಭೆ ವ್ಯಾಪ್ತಿಯ ಎದುರಿನ ರಸ್ತೆಯ ಡಾಮರೀಕರಣಕ್ಕೆ ಇಲ್ಲಿನ ಮುಸ್ಲೀಮರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಇದು ಸಾರ್ವಜನಿಕರಿಗೆ ಅನುಕೂಲವಾಗುವ ರಸ್ತೆಯಾಗಿದ್ದು, ಇದನ್ನು ಪುರಸಭೆ, ಸರಕಾರ ಅಭಿವೃದ್ಧಿಪಡಿಸಬೇಕಿದೆ. ಈ ಬಗ್ಗೆ ಸರಕಾರ, ಶಾಸಕರು ಗಮನಕೊಡಲಿ. ಇನ್ನು ಕಾಲೇಜು ಆವರಣದೊಳಗಿರುವ ದರ್ಗಾ ಗೋಡೆ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದ್ದು, ಆ ಬಳಿಕ ಮುಂದಿನ ಹೋರಾಟ ಮಾಡಲಾಗವುದು ಎಂದ ಅವರು, ಇಲ್ಲಿನ ಕೋರ್ಟ್, ಸರಕಾರಿ ಕಚೇರಿ, ಜನವಸತಿ ಪ್ರದೇಶವಿದ್ದು, ಅಲ್ಲಿ ಈವರೆಗೆ ಸರಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಸುಪ್ರೀಂಗಿಂತಲೂ ಶ್ರೇಷ್ಠ ಅನ್ನುವ ಮಾನಸಿಕತೆ ಅತ್ಯಂತ ಅಪಾಯಕಾರಿ. ಅಽಕಾರಿಗಳು ಏನು ಮಾಡುತ್ತಿದ್ದಾರೆ. ಪ್ರತಿ ನಿತ್ಯ 5 ಬಾರಿ ಅಜಾನ್ ಕೂಗುವುದರಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆ. ಇದು ಕೂಡಲೇ ನಿಲ್ಲಬೇಕು. ಈ ಬಗ್ಗೆ ಡಿಸಿ, ಎಸ್ಪಿ, ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹರ್ಷ ಹತ್ಯೆ ಪ್ರಕರಣದ ಲಾಭ ಪಡೆದ ಬಿಜೆಪಿಗರು, ಆ ಬಳಿಕ ತನಿಖೆಯ ಬಗ್ಗೆ ಗಮನವೇ ನೀಡದಿರುವುದು ದುರಂತ. ಇಂತಹ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕಾರ್‍ಯ ಮಾಡಬೇಕು.
ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮ ಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಪ್ರ.ಕಾರ್‍ಯದರ್ಶಿ ರಾಮಕೃಷ್ಣ ಶೆಟ್ಟಿ ಕುಂದಾಪುರ, ವಕ್ತಾರ ಶರತ್ ಮಣಿಪಾಲ ಉಪಸ್ಥಿತರಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಲ್ಲ..!
ಶ್ರೀ ರಾಮ ಸೇನೆಯು ರಾಜಕೀಯ ಪಕ್ಷವಲ್ಲ. ಸಾಂಸ್ಕೃತಿಕ ಸಂಘಟನೆಯಾಗಿದೆ. ಮುಂಬರುವ ಯಾವುದೇ ಚುನಾವಣೆಯಲ್ಲಿ ನಾನಾಗಲಿ, ನಮ್ಮ ಸೇನೆಯ ಯಾರೂ ಸ್ಪರ್ಧಿಸುವುದಿಲ್ಲ. ಹಿಂದೂ ಧರ್ಮದ ರಕ್ಷಣೆಯೇ ಶ್ರೀರಾಮ ಸೇನೆಯ ಮೂಲ ಧ್ಯೇಯವಾಗಿದ್ದು, ಹಿಂದುತ್ವದ ವಿಚಾರದಲ್ಲಿ ಹೊಂದಾಣಿಕೆಯಾಗುವ ಪ್ರಶ್ನೆಯೇ ಇಲ್ಲ.
– ಪ್ರಮೋದ್ ಮುತಾಲಿಕ್
Comments are closed.