ಕರಾವಳಿ

ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಬೃಹತ್ ಖಾದಿ ಮೇಳಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಚಾಲನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನದಡಿ ಬಿಜೆಪಿ ಕುಂದಾಪುರ ಮಂಡಲದ ವತಿಯಿಂದ ಬಿಜೆಪಿ ಕಚೇರಿಯಲ್ಲಿ ಬೃಹತ್ ಖಾದಿ ಮೇಳ ಭಾನುವಾರ ನಡೆಯಿತು.

ಖಾದಿ ಮೇಳಕ್ಕೆ ಚಾಲನೆ ನೀಡಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮ ಗಾಂಧೀಜಿ ಅವರು ಖಾದಿ ಬಳಕೆಗೆ ಕರೆ ನೀಡಿದ್ದರು. ಖಾದಿ ನಮ್ಮ ದೇಶದ ಪ್ರತೀಕ. ಅದನ್ನು ನಾವು ಹೆಚ್ಚೆಚ್ಚು ಬಳಸುವ ಮೂಲಕ ದೇಶದ ಬೆಳವಣಿಗೆಗೆ ಕೊಡುಗೆ ಸಲ್ಲಿಸೋಣ ಎಂದು ಹೇಳಿದರು.

ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ ಮಾತನಾಡಿ, ಪ್ರಧಾನಿ ಮೋದಿಯವರ ಜನ್ಮ ದಿನದ ಪ್ರಯುಕ್ತ ಸೇವಾ ಪಾಕ್ಷಿಕವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಗಾಂಧಿ ಜಯಂತಿ ದಿನ ಈ ಅಭಿಯಾನ ಸಮಾಪನಗೊಳ್ಳುತ್ತಿದ್ದು, ಈ ದಿನ ಬೇರೆ ಬೇರೆ ಕಡೆಗಳಲ್ಲಿ ಸ್ವಚ್ಛತೆ, ಖಾದಿ ಮೇಳದಂತಹ ಕಾರ್‍ಯಕ್ರಮ ನಡೆಯುತ್ತಿದೆ. ಗಾಂಧೀಜಿಯವರೇ ಅಂದೇ ಖಾದಿ ಬಳಕೆಗೆ ಒತ್ತು ನೀಡಿದ್ದರು. ದೇಶದ ಹಿತದೃಷ್ಟಿಯಿಂದ ನಾವೆಲ್ಲ ಖಾದಿ ಬಳಕೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ನಾಗರಿಕ ಮತ್ತು ಆಹಾರ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್‍ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಧಾನ ಕಾರ್‍ಯದರ್ಶಿ ಸತೀಶ್ ಪೂಜಾರಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.

Comments are closed.