ಉಡುಪಿ: ಕಾರ್ಯಕ್ರಮದಲ್ಲಿ ಭಾಗವಹಿಸಲು ಕೃಷ್ಣನಗರಿಗೆ ಆಗಮಿಸಿದ್ದ ಖ್ಯಾತ ನಟ, ನಿರೂಪಕ ಡಾ.ರಮೇಶ್ ಅರವಿಂದ್ ಉಡುಪಿ ಸಮೀಪದ ಕುದ್ರು ನೆಸ್ಟ್ ಸ್ಟೇ ಹೋಮ್ ಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಫಿದಾ ಆದರು.
ರಮೇಶ್ ಅರವಿಂದ್ ಕಾರಿನಿಂದ ಇಳಿದು ಬರುತ್ತಿದ್ದಂತೆಯೇ ತೋಟದ ಅಲಂಕಾರಗಳನ್ನು ಕಂಡು “ಏನ್ರೀ ನಿಮ್ ಟೇಸ್ಟ್ ಬಹಳ ಚೆನ್ನಾಗಿದೆ” ಎಂದು ಕುದ್ರು ಹೋಮ್ ಸ್ಟೇ ನಿರ್ವಹಿಸುತ್ತಿರುವ ಛಾಯಾಗ್ರಾಹಕ ಫೋಕಸ್ ರಘುಗೆ ಹೇಳಿದರು. ಸ್ವರ್ಣಾ ನದಿಯನ್ನು ಕಂಡು, ಮರದ ಸೇತುವೆಯ ಮೇಲೆ ನಿಂತು ‘ಅಬ್ಬಬ್ಬಾ, ಏನ್ರೀ ಇದು, ಅದ್ಭುತವಾಗಿದೆ’ ಎಂದು ರೋಮಾಂಚನಗೊಂಡರು.
ಅಲ್ಲೇ ಬಲಕ್ಕಿರುವ ಬ್ಯಾಂಬೂ ಹೌಸಿಗೆ ಹೋಗಿ ಗಾಜಿನ ಮೇಲ್ಚಾವಣಿ ಕಂಡು “ಏಕಾಂತದಲ್ಲಿ ಸ್ಕ್ರಿಪ್ಟ್ ಬರೆಯಲು ಹೇಳಿ ಮಾಡಿಸಿದ ಜಾಗ” ಎಂದು ತಕ್ಷಣವೇ ಮೊಬೈಲಲ್ಲಿ ಫೋಟೋ ಕ್ಲಿಕ್ಕಿಸಿ ಮಗಳಿಗೆ ಕಳುಹಿಸಿಕೊಟ್ಟು ಇನ್ನೊಮ್ಮೆ ಫ್ಯಾಮಿಲಿ ಜೊತೆ ಇಲ್ಲಿಗೆ ಬರೋಣ ” ಎಂದರು.
“ಇದೇ ಜಾಗದಲ್ಲಿ ನನ್ನದೊಂದು ಫೋಟೋಶೂಟ್ ಮಾಡ್ತೀರಾ? ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ” ಎಂದು ಫೋಕಸ್ ರಘುಗೆ ಹೇಳಿದರು. ನಂತರ ಕುದ್ರು ನೆಸ್ಟ್ ಹೋಮ್ ಮೇಡ್ ತಿನಿಸನ್ನು ಸವಿದು ತುಂಬಾ ಚೆನ್ನಾಗಿದೆ ಎಂದು ಶ್ಲಾಘಿಸಿದರು. ರಮೇಶ್ ಅರವಿಂದ ಅವರನ್ನು ಕುದ್ರು ನೆಸ್ಟ್ ಹೋಮ್ ಸ್ಟೇಗೆ ಕರೆದು ತಂದು ಪರಿಚಯಿಸಿದ್ದು ಪ್ರಸಿದ್ಧ ಮನಃಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ.
“ಕುದ್ರುಗೆ ಅಚ್ಚರಿ ಭೇಟಿ ಕೊಟ್ಟ ನಟನ ಇವತ್ತಿನ ವೀಕೆಂಡ್ ನಿಜಕ್ಕೂ ಸ್ಪೆಷಲ್. ಅನಿರೀಕ್ಷಿತವಾಗಿ ಕುದ್ರು ನೆಸ್ಟ್ ಗೆ ವಿಶೇಷ ಅತಿಥಿಯೊಬ್ಬರ ಆಗಮನ. ಇಡೀ ಕರ್ನಾಟಕಕ್ಕೇ ಮಾದರಿ ವ್ಯಕ್ತಿ, ಪ್ರಸಿದ್ಧ ನಟ, ಮಾತಿನ ಮಾಂತ್ರಿಕ, ಸ್ಪೂರ್ತಿಯ ಖಜಾನೆ ರಮೇಶ್ ಅರವಿಂದ್ ಉಡುಪಿಯ ನಮ್ಮ “ಕುದ್ರು ನೆಸ್ಟ್ ಹೋಮ್ ಸ್ಟೇ”ಗೆ ಆಗಮಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತು.ನನಗೆ ಇಲ್ಲಿ ಅವರ ಫೋಟೋ ಶೂಟ್ ನ ಆಫರ್ ಕೂಡ ಕೊಟ್ಟಿದ್ದು ಬಹಳ ಖುಷಿಯಾಯಿತು”ಎಂದು ಛಾಯಾಗ್ರಾಹಕ ಫೋಕಸ್ ರಘು ಪ್ರತಿಕ್ರಿಯಿಸಿದ್ದಾರೆ.
Comments are closed.