ಕರಾವಳಿ

ಕಲುಷಿತ ನೀರಿನಿಂದ ಕೋಟೇಶ್ವರ ಕೋಟಿಲಿಂಗೇಶ್ವರ ಪುಷ್ಕರಣಿಯ ಮೀನುಗಳ ಮಾರಣಹೋಮ..!

Pinterest LinkedIn Tumblr

(ವರದಿ, ಚಿತ್ರ- ಯೋಗೀಶ್ ಕುಂಭಾಸಿ)

ಕುಂದಾಪುರ: ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು ಕೆಲವು ದಿನಗಳ ಅಂತರದಲ್ಲಿ ಹಲವಾರು ಮೀನುಗಳು ಸಾಯುತ್ತಿದ್ದು ಈ ಬಗ್ಗೆ ದೇವಸ್ಥಾನದವರು, ಸ್ಥಳೀಯಾಡಳಿತ ಹಾಗೂ ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಹಲವು ವರ್ಷಗಳ ಇತಿಹಾಸವಿರುವ ಕೋಟಿತೀರ್ಥ ಪುಷ್ಕರಣಿ ಸುಮಾರು ೪ ಎಕರೆ ವಿಸ್ತೀರ್ಣದ್ದಾಗಿದ್ದು ಈಶಾನ್ಯ ದಿಕ್ಕಿನಲ್ಲಿ ಕೊಳಚೆ ನೀರು ಜಿನುಗಿ ಬರುತ್ತಿದ್ದು ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ನೀರು ವಿಪರೀತವಾಗಿ ದುರ್ವಾಸನೆ ಬೀರುತ್ತಿದ್ದು ಕೆರೆಯಲ್ಲಿರುವ ಮೀನುಗಳು ಸಾಯುತ್ತಿದ್ದು ಕೆರೆಯ ನೀರಿನ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಪದರದಂತೆ ಕಂಡುಬರುತ್ತಿದೆ. ಪುಷ್ಕರಣಿ ಈಶಾನ್ಯ ಭಾಗದಲ್ಲಿ ಚರಂಡಿಯೊಂದು ಹರಿಯುತ್ತಿದ್ದು ಅಲ್ಲಿಗೆ ಕೆಲವು ಉದ್ಯಮದವರು ಕಲುಷಿತ ನೀರನ್ನು ಬಿಡುತ್ತಾರೆ. ಆ ಚರಂಡಿಯಲ್ಲಿ ನೀರು ತುಂಬಿದಾಗ ದೇವಸ್ಥಾನದ ಕೆರೆ, ನೆರೆಹೊರೆಯ ಪರಿಸರ, ಕೃಷಿಭೂಮಿಗೂ ನೀರು ನುಗ್ಗುತ್ತಿದೆ. ಅಲ್ಲದೇ ಸಮೀಪದ ಹದಿನೈದಕ್ಕೂ ಅಧಿಕ ಮನೆಗಳ ಬಾವಿಯ ನೀರು ಹಾಳಾಗುತ್ತಿದೆ ಎಂದು ಸ್ಥಳೀಯರಿಂದ ಆರೋಪ ಕೇಳಿಬಂದಿದೆ. ನಿತ್ಯ ಈ‌ ಪುಷ್ಕರಣಿಯ ನೀರಿನಿಂದ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ ಬರುವ ಭಕ್ತರು ಕೂಡ ಸ್ನಾನ ಹಾಗೂ ತೀರ್ಥ ಪ್ರೋಕ್ಷಣೆ ಮಾಡುವ ಸಂಪ್ರದಾಯ ಕೂಡ ಇದ್ದು ಇದೀಗಾ ನೀರು ಸಂಪೂರ್ಣ ರಾಡಿಯಾಗಿದೆ.

ಗ್ರಾಮಪಂಚಾಯತಿಗೆ ಮನವಿ: ಕೆರೆಯ ನೀರು ಕಲುಷಿತಗೊಳ್ಳುತ್ತಿದ್ದು ನಿತ್ಯ ಇದೇ ನೀರಿನಲ್ಲಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ ಭಕ್ತರು ಇದರಲ್ಲಿ ಸ್ನಾನ ಮಾಡುವ ಕಾರಣ ಅನಾರೋಗ್ಯ ಸಮಸ್ಯೆಗಳು ಸೃಷ್ಟಿಯಾಗಲಿದೆ. ಈ ಕುರಿತು ಸ್ಥಳೀಯಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋಟೇಶ್ವರ ಗ್ರಾ.ಪಂ.ಗೆ ಸಾರ್ವಜನಿಕರು ದೂರು ನೀಡಿದ್ದಾರೆ.

*ಬಾಕ್ಸ್*

ಸ್ಥಳ ಪರಿಶೀಲನೆ..
ಕೋಟಿತೀರ್ಥ ಪುಷ್ಕರಣಿ ಹಾಗೂ ಚರಂಡಿಯಲ್ಲಿ ಕಲುಷಿತ ನೀರು ಹರಿಯುವ ಸ್ಥಳಕ್ಕೆ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ, ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ರಾಯ್ಸನ್ ಡಿಮೆಲ್ಲೂ, ರಾಜು ಮರಕಾಲ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಸುರೇಶ್ ಕಾಮತ್, ಜಗನ್ನಾಥ್ ಭಟ್, ಡಾ.ಕೆ. ಸೋಮಶೇಖರ ಉಡುಪ ಮೊದಲಾದವರು ಮಾಹಿತಿ ನೀಡಿದರು.

*ಬಾಕ್ಸ್ ಐಟಮ್:*

ಕೆರೆ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಸ್ಥಳೀಯರಿಂದ ಗ್ರಾಮಪಂಚಾಯತ್‌ಗೆ ದೂರು ಬಂದಿದೆ. ದೂರಿನಲ್ಲಿ ಸ್ಥಳೀಯ ರೈಸ್‌ಮಿಲ್ ನೀರು ಚರಂಡಿಗೆ ಬೀಡಲಾಗುತ್ತಿದೆ ಎಂಬ ದೂರುಗಳಿವೆ. ಆ ದೂರಿನ ಮೇರೆಗೆ ಸ್ಥಳ‌ ಪರಿಶೀಲನೆ ನಡೆಸಿದ್ದಲ್ಲದೆ ಸಂಬಂಧಪಟ್ಟವರನ್ನು ಕರೆಸಿ ಮಾಹಿತಿ ಪಡೆಯಲಾಗಿದ್ದು ಅವರು ತಮ್ಮ ಸಮಸ್ಯೆಯಲ್ಲ‌ವೆಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆಯನ್ನು ನೀರನ್ನು ಹೆಚ್ಚಿನ ಮಾಹಿತಿಗಾಗಿ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಪ್ರಯೋಗಲಾಯದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಕೃಷ್ಣ ಗೊಲ್ಲ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು

ಚರಂಡಿಯಲ್ಲಿ ಕಲುಷಿತ ನೀರು ಹರಿಯುವುದರಿಂದ ಈ ಭಾಗದ ಹದಿನೈದು ಅಧಿಕ ಮನೆಗಳ ಬಾವಿ ನೀರು ಹಾಳಾಗುತ್ತಿದ್ದು ಕುಡಿಯಲು ಯೋಗ್ಯವಾಗಿಲ್ಲ. ಕಳೆದ ಮೂರು ವರ್ಷದಿಂದ ಈ‌ ಸಮಸ್ಯೆ ಅನುಭವಿಸುತ್ತಿದ್ದೇವೆ. ಈಗಾಗಾಲೇ ಗ್ರಾ.ಪಂ ಗೂ ಕೂಡ ಹಲವು ಬಾರಿ ಮನವಿ ನೀಡಲಾಗಿದೆ.
– ಸುರೇಶ್ ಕಾಮತ್ (ಸ್ಥಳೀಯ ನಿವಾಸಿ)

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಪ್ರಸಿದ್ಧವಾದ ಕೋಟಿತೀರ್ಥ ಪುಷ್ಕರಣಿ ಇಂದು ಕಲುಷಿತವಾಗಿ ಜಲಚರಗಳು ಸಾಯುತ್ತಿರುವುದು‌ ದುರಂತ. ಮಾನವನ ಬೇಜವಬ್ದಾರಿತನಕ್ಕೆ ಸಿಕ್ಕು ಆರೋಗ್ಯವೇ ಭಾಗ್ಯ ಎಂಬ ಪರಿಕಲ್ಪನೆ ಹಾದಿತಪ್ಪುತ್ತಿದೆ. ನಮ್ಮ ಮನೆ ಸಹಿತ ಅಕ್ಕಪಕ್ಕದ ಮನೆಗಳ ಬಾವಿ ನೀರು ಕಲುಷಿತಗೊಂಡಿದ್ದು ಇದೆಲ್ಲಾ ಸರಿಯಾಗಲು ಹಲವು ವರ್ಷಗಳೇ ಬೇಕಾಗಬಹುದು. ತಕ್ಷಣ ಸಂಬಂದಪಟ್ಟವರು ಸೂಕ್ತ ಕ್ರಮವಹಿಸಬೇಕು.
– ಡಾ. ಕೆ. ಸೋಮಶೇಖರ್ ಉಡುಪ ( ಸ್ಥಳೀಯ ನಾಗರಿಕ)

Comments are closed.