ಕರಾವಳಿ

ಗುಜರಿ ವ್ಯಾಪಾರವೇ ವೃತ್ತಿ..ಸಾಹಿತ್ಯದಲ್ಲಿ ಅಪಾರ ಆಸಕ್ತಿ: ಯಾಕೂಬ್ ಖಾದರ್ ಗುಲ್ವಾಡಿಗೆ ಅರಸಿ ಬಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಹಲವು ವರ್ಷಗಳಿಂದ ಕನ್ನಡ ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಭಾಷೆ, ಬರವಣಿಗೆ, ಸಮಾಜ ಸೇವೆ, ಸಂಘಟನೆ,ಪ್ರಾಚ್ಯ ವಸ್ತು ಸಂಗ್ರಹ ವಿಶೇಷವಾಗಿ ,ಅಭಿನಯ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗುಲ್ವಾಡಿಯ ಯಾಕೂಬ್ ಖಾದರ್ ಅವರಿಗೆ ಈ ಬಾರಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಎರಡು ಬಾರಿ ಸದಸ್ಯರಾಗಿ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ,ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದು ಇವರ ಮೊದಲ ನಿರ್ಮಾಣದ ” ರಿಸರ್ವೇಶನ್ ” ಎಂಬ ಕನ್ನಡ ಚಲನ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ (ರಜತ ಕಮಲ) ಸೇರಿದಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಬಂದಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಜೊತೆಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿದೆ. ” ಟ್ರಿಪಲ್ ತಲಾಖ್ “ಎನ್ನುವ ಸೂಕ್ಷ್ಮ ಸಂವೇದನೆಯ ಬ್ಯಾರಿ ಭಾಷೆಯ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಲ್ಲದೆ “ಆ 90 ದಿನಗಳು” ಎಂಬ ಸಿನಿಮಾವನ್ನು ರೊನಾಲ್ಡ್ ಲೋಬೊ ಅವರೊಂದಿಗೆ ಒಟ್ಟಾಗಿ ನಿರ್ದೇಶನ ಮಾಡಿದ್ದರು. ವಿಶೇಷವೆಂದರೆ ಈ ಸಿನಿಮಾ ಕೂಡ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾಗಿತ್ತು.

ಯಾಕೂಬ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಡಾ. ರಿಚರ್ಡ್ ಕಾಸ್ಟಲೀನೊ ಅವರ ಸಾಕ್ಷ್ಯಚಿತ್ರ ,ಕರ್ನಾಟಕ ವಾರ್ತ ಇಲಾಖೆಗೆ ಡಾ. ಹೆಚ್. ಕೆ ರಾಮನಾಥ್ ಅವರ ಸಾಕ್ಷ್ಯಚಿತ್ರ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಸಾಕ್ಷ್ಯಚಿತ್ರ, ಕೆರೆಕಟ್ಟೆ ಸಂತ ಅಂಥೊನಿ ಅವರ ಸಾಕ್ಷ್ಯಚಿತ್ರ. ಜೊತೆಗೆ ಕೊರೋನ ಸಂಬಂಧ ಹಾಡುಗಳನ್ನು ನಿರ್ದೇಶನ ಮಾಡಿದ್ದಾರೆ. ಅಂಡಮಾನ್ ನಲ್ಲಿ ಸುನಾಮಿ ಸಂತ್ರಸ್ತರ ಸೇವೆಗೈದ ಕಾರಣ ಕೇಂದ್ರ ಸರ್ಕಾರದ ಗೌರವ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ದುಬೈಯಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಗೌರವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ , ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಅಮೆರಿಕ, ಕೆನಡ, ಇಂಗ್ಲೆಂಡ್, ಸೌದಿ ಅರೇಬಿಯಾ, ದುಬೈ, ಒಮಾನ್, ಸಿಂಗಾಪುರ, ಥಾಯ್ಲೆಂಡ್, ಮಲೇಶಿಯಾ, ಶ್ರೀಲಂಕಾ, ಮಾಲ್ಡೀವ್ಸ್, ತಾಂಜಾನಿಯ, ಕಿನ್ಯಾ ಮುಂತಾದ ದೇಶಗಳಲ್ಲಿ ಕನ್ನಡ ಮತ್ತು ಬ್ಯಾರಿ ಭಾಷೆ ಸಾಹಿತ್ಯ, ಸಿನಿಮಾವನ್ನು ಕೊಂಡು ಹೋಗಿದ್ದಲ್ಲದೆ ತಾನು ತಿರುಗಾಡಿದ ದೇಶಗಳ ಅನುಭವಗಳನ್ನು ” ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ” ಅಂಡಮಾನ್ ಮತ್ತು ಸುನಾಮಿ ” ನನ್ನ ಫಾರೀನ್ ಟೂರಿಂಗ್ ಟಾಕೀಸ್ ” ಎಂಬ ಮೂರು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

6 ನೇ ತರಗತಿ ಪ್ರಾಥಮಿಕ ವಿದ್ಯಾಭ್ಯಾಸವಷ್ಟೆ ಮಾಡಿದ ಯಾಕೂಬ್ ಅವರಿಗೆ ಈಗಲೂ ಓದಬೇಕೆಂಬ ಹಂಬಲವೇ ಅವರನ್ನು ಸಾಹಿತ್ಯ ಹಾಗೂ ಚಿತ್ರದ ವಿಚಾರದಲ್ಲಿ ಸಾಧನೆ ಮಾಡಲು ಉತ್ತೇಜಿಸುತ್ತಿದೆ. ಯಾಕೂಬ್ ವೃತ್ತಿಯಲ್ಲಿ ಹಳೆಯ ಗುಜರಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದು ಗುಲ್ವಾಡಿಯಲ್ಲಿ ಅಂಗಡಿ ಹೊಂದಿದ್ದಾರೆ.

ಅರ್ಜಿ ಸಲ್ಲಿಸಿಲ್ಲ: ಪ್ರಶಸ್ತಿಗಾಗಿ ಯಾವುದೇ ಅರ್ಜಿ ಸಲ್ಲಿಸಿಲ್ಲ. ನಾನು ಮಾಡಿದ ಕೆಲಸ ಗುರುತಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳು. ಸಂತಸದ ಜೊತೆಗೆ ಜವಬ್ದಾರಿ ಕೂಡ ಹೆಚ್ಚಿದ್ದು ಮುಂದಿನ ದಿನದಲ್ಲಿಯೂ  ಪ್ರಾಮಾಣಿಕವಾಗಿ ಕನ್ನಡ ಸೇವೆ ಮಾಡುವೆ ಎಂದು ಯಾಕೂಬ್ ಖಾದರ್ ಗುಲ್ವಾಡಿ ಅಭಿಪ್ರಾಯ ತಿಳಿಸಿದರು.

 

 

Comments are closed.