ಕರಾವಳಿ

ಕುಂದಾಪ್ರ ಭಾಷಿ ಚಂದ.. ಇಲ್ಲಿ ಬದ್ಕ್ ಚಂದ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸಿ ಕೆ. ರಾಜು

Pinterest LinkedIn Tumblr

ಕುಂದಾಪುರ: ಇಲ್ಲಿ ಭಾಷಿ ಚಂದ.. ಇಲ್ಲಿ ಬದ್ಕ್ ಚಂದ. ಇಲ್ಲಿ ಇಪ್ಪುಕೆ, ಈ ಭಾಷಿ ಮಾತಾಡುಕೆ ಈ ಜನ್ಮ ಸಾಕಾತಿಲ್ಲ. ಅಭಿಮಾನ ಕಡಿಮೆ ಆತಿಲ್ಲ ಎಂದು ಕುಂದಾಪುರ ಕನ್ನಡದಲ್ಲಿಯೇ ಉಪವಿಭಾಗಾಧಿಕಾರಿ ರಾಜು ಕೆ. ಬಣ್ಣಿಸಿದರು.

ಕುಂದಾಪುರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ, ಕರ್ನಾಟಕ ಎಂದರೆ ಬರೀ ಭಾಷೆಯಲ್ಲ, ಭಾವನಾತ್ಮಕ ಸಂಬಂಧ, ಮಹಾಸಾಗರದ ಹೆಬ್ಬಾಗಿಲಿನಂತಿರುವ ಕರಾವಳಿ ಪರಂಪರೆ, ವೈವಿಧ್ಯತೆ, ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ ಸೊಗಡು, ವಿಶಿಷ್ಟತೆಗಳ ಮೂಲಕ ಹೆಸರಾಗಿದೆ. ಭಾಷಾವಾರು ಪ್ರಾಂತ್ಯಗಳ ರಚನೆ, ಏಕೀಕರಣ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಮತ್ತು ಇದಕ್ಕಾಗಿ ದುಡಿದ ಮಹನೀಯರ ಸ್ಮರಿಸುವ ಮಹತ್ವದ ದಿನ. ನಮ್ಮ ನಾಡಿನ ವೈಶಿಷ್ಟ್ಯತೆಗೆ ಮತ್ತಷ್ಟು ಮೆರಗು ನೀಡಿರುವ ಕರಾವಳಿ ಪ್ರದೇಶ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.

ಕಾಡು, ಕಡಲುದೈವ ದೇವರು ನಂಬಿಕೆ ಸಾಹಸಗಳ ಮಹಿಮೆ ಬಣ್ಣಿಸಿದ ಕಾಂತಾರ ದಂತಕಥೆಯ ನೆಲವಿದು.  ಮತ್ತೊಮ್ಮೆ ಜಗತ್ತಿನ ಗಮನ ಸೆಳೆದ ಕಾಮನ್‌ವೆಲ್ತ್ ಪಂದ್ಯಾಟದಲ್ಲಿ ಸಾಧನೆ ಮಾಡಿದ ಗುರುರಾಜ್ ಪೂಜಾರಿ ಸೇರಿಂದತೆ ಹಲವು ಕ್ಷೇತ್ರಗಳಲ್ಲಿ ಈ ಪ್ರದೇಶ ಕರ್ನಾಟಕದ ಹಿರಿಮೆಯ ಮುಕುಟವಾಗಿದೆ. ಯಕ್ಷಗಾನದ ಮೂಲಕ ನುಡಿಸೇವೆ, ಸಾಟಿಯಿಲ್ಲದ ತಾಯ್ನುಡಿ-ತಾಯ್ನೆಲದ ಅಭಿಮಾನ ಪ್ರದೇಶದ ಮತ್ತೊಂದು ವಿಶೇಷತೆ ಎಂದರು.

ಕುಂದಾಪುರ ಠಾಣಾಧಿಕಾರಿ ಸದಾಶಿವ ಆರ್. ಗವರೋಜಿ ನೇತೃತ್ವದಲ್ಲಿ ವಿವಿಧ ಶಾಲಾ ಮಕ್ಕಳ ಸ್ಕೌಟ್, ಗೈಡ್ಸ್, ಸೇವಾದಳ, ಎನ್‌ಸಿಸಿ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಪೌರಕಾರ್ಮಿಕರಿಂದ ನಡೆದ ಪಥ ಸಂಚಲನದಲ್ಲಿ ಸೈಂಟ್ ಜೋಸೆಪ್ ಪ್ರೌಢಶಾಲೆ ಮಕ್ಕಳ ಬ್ಯಾಂಡ್ ವಾದನ ಸಾಗಿಬಂತು. ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆ ಸಂಗೀತ ಶಿಕ್ಷಕ ಪ್ರಕಾಶ್ ಮತ್ತು ವಿದ್ಯಾರ್ಥಿಗಳು, ಶ್ರೀ ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಸಣ್ಣಯ್ಯ, ಶ್ರೀಧರ ಶೇರೆಗಾರ್, ವತ್ಸಲಾ, ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ, ಸಿಡಿಪಿಒ ಶ್ವೇತಾ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಇದ್ದರು.

ಕುಂದಾಪುರ ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ವಂದಿಸಿದರು.

ನಾಡು ನುಡಿ ಬಗೆಗಿನ ಅಭಿಮಾನದ ಜೊತೆಗೆ ಅಭಿವೃದ್ಧಿಯ ಹೆಜ್ಜೆಗಳ ವೇಗಗೊಳಿಸುವ ಅಗತ್ಯತೆಯೂ ನಮ್ಮ ಮೇಲಿದೆ. ಭಾಷೆ ಹಾಗೂ ಬದುಕಿನ ಪ್ರಗತಿಗೆ ಒಗ್ಗಟ್ಟಿನ ಪ್ರಯತ್ನ ಅಗತ್ಯವಾಗಿದೆ. ಸರ್ವೋದಯವಾಗಲಿ, ಸರ್ವರಲಿ ಎನ್ನುವ ಕುವೆಂಪು ಆಶಯದಂತೆ ರಾಜ್ಯೋತ್ಸವ ಮತ್ತಷ್ಟು ಹೊಸತನ ತರಲಿ, ಯಶಸ್ಸು ತರಲಿ.
– ರಾಜು ಕೆ., ಉಪವಿಭಾಗಾಧಿಕಾರಿ, ಕುಂದಾಪುರ

Comments are closed.