ಶಿವಮೊಗ್ಗ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವು ಸಂಶಯಾಸ್ಪದವಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಂತರ ಸತ್ಯಾಂಶ ಹೊರಬಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಂದ್ರಶೇಖರ್ ಸಾವಿನ ಬಗ್ಗೆ ಹುಬ್ಬಳ್ಳಿ, ದಾವಣಗೆರೆಯಿಂದಲೂ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಬಂದಮೇಲೆ ಎಲ್ಲಾ ಮಾಹಿತಿ ಸಿಗುತ್ತದೆ. ಸಿಸಿ ಟಿವಿಯ ಫೂಟೇಜ್ ಸಿಕ್ಕಿದೆ. ಡ್ರೋಣ್ ಮೂಲಕ ಕಾಲುವೆ ಬಳಿ ಪರಿಶೀಲನೆ ನಡೆಸಿದಾಗ ಕಾರಿನ ಮುಂಭಾಗ ನೀರಿನಲ್ಲಿ ಕಂಡುಬಂದಿದ್ದು, ಕಾರನ್ನು ಮೇಲಕ್ಕೆತ್ತಿದಾಗ ಅದರಲ್ಲಿ ಚಂದ್ರಶೇಖರ್ ಶವ ಸಿಕ್ಕಿದೆ. ಕುಟುಂಬದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ. ಎಎಸ್‌ಐಎಲ್ ಲ್ಯಾಬ್ ವರದಿ ಬಂದ ಬಳಿಕ ಖಚಿತ ಮಾಹಿತಿ ನೀಡಲಾಗುವುದು ಎಂದರು.
ಪ್ರಕರಣದ ಹಿನ್ನೆಲೆ ಅನುಮಾನಾಸ್ಪದ ವ್ಯಕ್ತಿಗಳ ತನಿಖೆ ನಡೆಯುತ್ತಿದೆ. ಚಂದ್ರಶೇಖರ್ ಸಾವಿಗೂ ಮುನ್ನ ಗೌರಿಗದ್ದೆಗೆ, ಶಿವಮೊಗ್ಗಕ್ಕೆ ಬಂದು ಹೋಗಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಅನೇಕರನ್ನು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಲಾಗುತ್ತಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ವಿನಯ್ ಗುರೂಜಿ ವಿಚಾರಣೆ ಅಗತ್ಯವೆನ್ನಿಸಿಲ್ಲ. ಎಂದರು.
ಈ ಸಂದರ್ಭದಲ್ಲಿ ಪೂರ್ವವಲಯ ಐಜಿಪಿ ತ್ಯಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮ್ಟೆ, ಡಿವೈಎಸ್‌ಪಿ ಬಾಲರಾಜ್, ಸಾಗರದ ಎಎಸ್‌ಪಿ ರೋಷನ್ ಜಗದೀಶ್, ಭದ್ರಾವತಿ ಎಎಸ್ಪಿ ಜೀತೆಂದ್ರ ಮತ್ತಿತರರು ಇದ್ದರು.
Comments are closed.