ಕುಂದಾಪುರ: ಗಂಗೊಳ್ಳಿಯ ಗುಡ್ಡಿಕೇರಿ ಸಮೀಪದ ಶ್ರೀ ರಾಮನಾಥ ಸುಹಾಸಿನಿ ದೇವಸ್ಥಾನದ ಮುಂಭಾಗದಲ್ಲಿ ಪಂಚಗಂಗಾವಳಿ ನದಿಯ ದಡದಲ್ಲಿ ಗೋವಿನ ತಲೆ ಪತ್ತೆಯಾಗಿದೆ.
ಶನಿವಾರ ಸಂಜೆ ವೇಳೆ ಈ ಘಟನೆ ವರದಿಯಾಗಿದ್ದು ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೂರು ದಾಖಲು:
ಶನಿವಾರ ಸಂಜೆ ವೇಳೆ ದೇವಸ್ಥಾನದ ಮುಂಭಾಗದಲ್ಲಿನ ಹೊಳೆ ತೀರದಲ್ಲಿ ಜಾನುವಾರು ತಲೆ ಭಾಗ ಕಂಡುಬಂದಿದೆ. ಗಂಗೊಳ್ಳಿ ಭಾಗದಲ್ಲಿ ಹಿಂದಿನಿಂದಲೂ ನಿರಂತರವಾಗಿ ಗೋ ಸಾಗಾಟ, ಗೋ ಹತ್ಯೆ ನಡೆಯುತ್ತಿದ್ದು ಹಿಂದೂಗಳ ಧಾರ್ಮಿಕ ಭಾವನೆ ಕೆರಳಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವ ದುರುದ್ದೇಶದಿಂದ ಇಂತಹ ಕುಕೃತ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂದೂ ಪರ ಸಂಘಟನೆ ಮುಖಂಡ ಹಾಗೂ ಸ್ಥಳೀಯ ನಿವಾಸಿ ನವೀನ್ ಗಂಗೊಳ್ಳಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಿಂಜಾವೇ ಖಂಡನೆ..
ಶಾಂತಿಯುತವಾಗಿರುವ ಗಂಗೊಳ್ಳಿಯಲ್ಲಿ ಕೋಮು ಸಾಮರಸ್ಯ ಕದಡಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುವವರನ್ನು ತಕ್ಷಣ ಬಂಧಿಸಬೇಕು ಹಾಗೂ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಗಂಗೊಳ್ಳಿಯಲ್ಲಿ ನಡೆದ ಈ ಕೃತ್ಯವನ್ನು ಹಿಂಜಾವೇ ಬಲವಾಗಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.