ಕರಾವಳಿ

ಶಾಲಾ-ಕಾಲೇಜಿನಲ್ಲಿ ಕಳ್ಳತನ ಮಾಡ್ತಿದ್ದ ಇಬ್ಬರು ಅಂದರ್; 4 ಜಿಲ್ಲೆಯ 37 ಪ್ರಕರಣ ಭೇದಿಸಿದ ಉಡುಪಿ ಪೊಲೀಸರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನ ನಡೆಸಿದ ಆರೋಪಿಗಳಿಬ್ಬರನ್ನು ನ.21ರಂದು ಉಡುಪಿ ಜಿಲ್ಲಾ ಪೊಲೀಸರ ತಂಡ ಬಂಧಿಸಿದೆ.

ತಮಿಳುನಾಡು ಸೇಲಂ ಮೂಲದ ಕುಮಾರಸ್ವಾಮಿ (59), ಕಾಪು ಹೆಜಮಾಡಿಯ ಜಾಹೀದ ಸಿನಾನ್ (32) ಬಂಧಿತರು. ಕೋಟ ಠಾಣಾ ವ್ಯಾಪ್ತಿಯ ಆವರ್ಸೆ ಗ್ರಾಮದ ಬಳಿ ಬೈಕಿನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಈ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಬೆನ್ನತ್ತಿದ ಪೊಲೀಸರು..
ಶಾಲಾ-ಕಾಲೇಜಿನಲ್ಲಿ ಸರಣಿ ಕಳ್ಳತನ ಪ್ರಕರಣಗಳು ಉಡುಪಿ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ಆದೇಶದಂತೆ ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ಕೋಟ ಠಾಣೆ ಪಿಎಸ್ಐ ಮಧು ಬಿ.ಇ ಹಾಗೂ ಸಿಬ್ಬಂದಿಗಳು ಆರೋಪಿ ಪತ್ತೆಗೆ ಎಲ್ಲ ಶಾಲಾ ಕಾಲೇಜುಗಳ ಮಾಹಿತಿ, ಅಪರಾಧ ನಡೆದ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಆಧರಿಸಿ, ಸಿಸಿ ಕ್ಯಾಮೇರಾಗಳ ಪರಿಶೀಲನೆ, ಲಾಡ್ಜ್ ಪರಿಶೀಲನೆ, ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ವ್ಯಕ್ತಿಗಳು ಹಾಗೂ ವಾಹನದ ಮಾಹಿತಿ ಬಗ್ಗೆ ನಿಗಾವಹಿಸಿದ್ದರು.

ಖತರ್ನಾಕ್ ಆರೋಪಿಗಳು..!
ಪ್ರಕರಣದ ಆರೋಪಿ ಕುಮಾರಸ್ವಾಮಿ ಮೇಲೆ ಈ ಹಿಂದೆ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ ಪ್ರಕರಣ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣದಲ್ಲಿ ಹಳೆ ಆರೋಪಿಯಾಗಿದ್ದು ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟು 2014 ರಿಂದ 2021 ರವರೆಗೆ ಸುಮಾರು 7 ವರ್ಷಗಳ ಕಾಲ ಕಾರವಾರ ಜೈಲ್ ನಲ್ಲಿದ್ದು ಶಿಕ್ಷೆಯನ್ನು ಅನುಭವಿಸಿದ್ದ. ಕಾಪು ಮೂಲದ ಜಾಹಿದ್ ಸಿಯಾನ ಕಳ್ಳತನ ನಡೆಸಲು ಸಂತೆಕಟ್ಟೆ ಉಡುಪಿ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದು ತಮಿಳುನಾಡಿನ ಆರೋಪಿ ಕುಮಾರ ಸ್ವಾಮಿಯನ್ನು ಕರೆಯಿಸಿಕೊಂಡು ಕಳ್ಳತನವನ್ನು ಮಾಡುತ್ತಿದ್ದನು.

ಜಿಲ್ಲೆ, ಹೊರ ಜಿಲ್ಲೆಯಲ್ಲೂ ಕೈಚಳಕ..!
ಕುಮಾರಸ್ವಾಮಿ 2021ರಲ್ಲಿಕಾರವಾರ ಜೈಲಿನಿಂದ ಬಿಡುಗಡೆಯಾದ ನಂತರ ಹೆಜಮಾಡಿಯ ಜಾಹೀದ್ ಸಿನಾನ್ ಜೊತೆ ಸೇರಿ ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 37 ಕಡೆ ರಾತ್ರಿ ಸಮಯ ಶಾಲಾ- ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಈ ಕುಖ್ಯಾತ ಕಳ್ಳರು ಉಡುಪಿ ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ಸರಹದ್ದಿನಲ್ಲಿ ಒಟ್ಟು 27 ಕಡೆ ಶಾಲಾ ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣೆಯಲ್ಲಿ 2 ಪ್ರಕರಣ, ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ, ಹೊಸನಗರ,ರಿಪ್ಪನಪೇಟೆ,ನಗರ ಠಾಣೆಗಳಲ್ಲಿ 6 ಪ್ರಕರಣ, ಉತ್ತರ ಕನ್ನಡ ಜಿಲ್ಲೆಯ ಮುಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳನ್ನು ಪೊಲೀಸರು ಆರೋಪಿಗಳನ್ನು ಬಂಧಿಸಿ ಈ ಮೇಲಿನ ಎಲ್ಲ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಈ ಆರೋಪಿಗಳಿಂದ 1 ಬೈಕ್, 2 ಮೊಬೈಲ್ ಪೋನ್ ಹಾಗೂ 10 ಸಾವಿರ ನಗದನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ.

ಕೋಟ ಠಾಣೆಯ ತನಿಖಾ ವಿಭಾಗದ ಪಿ.ಎಸ್‌‌‌‌‌‌.ಐ ಪುಷ್ಪಾ, ಪ್ರೊಬೇಷನರಿ ಪಿ.ಎಸ್‌‌‌‌.ಐ. ನೂತನ್ ಡಿ. ಈ , ಕೋಟ ಪೊಲೀಸ್ ಠಾಣಾ ಎ.ಎಸ್‌‌‌‌.ಐ. ರವಿ ಕುಮಾರ್‌‌‌, ಸಿಬ್ಬಂದಿಗಳಾದ ರಾಘವೇಂದ್ರ, ರಾಘವೇಂದ್ರ ಶೆಟ್ಟಿ ಪ್ರಸನ್ನ, ಮೋಹನ್ ಕೊತ್ವಾಲ್, ವಿಜೆಯೇಂದ್ರ ಮತ್ತು ಬ್ರಹ್ಮಾವರ ವೃತ್ತ ಕಛೇರಿಯ ಪ್ರದೀಪ ನಾಯಕ ಹಾಗೂ ಪೊಲೀಸ್ ಅಧೀಕ್ಷಕರ ಕಛೇರಿಯ ತಾಂತ್ರಿಕ ವಿಭಾಗದ ಶಿವಾನಂದ , ದಿನೇಶ , ನಿತಿನ್ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ತಂಡವನ್ನು ಅಭಿನಂದಿಸಿದ್ದಾರೆ.

Comments are closed.