ಮಂಗಳೂರು: ಯಕ್ಷಗಾನ ಮತ್ತು ತಾಳ-ಮದ್ದಳೆ ಕಲಾವಿದ ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ (90) ಅವರು ಬುಧವಾರ ನಿಧನರಾಗಿದ್ದಾರೆ.
ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಕುಂಬ್ಳೆ ಸುಂದರ್ ರಾವ್. ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು, ಅಲ್ಲದೆ 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿದ್ದರು.
ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಗೆ ಕುಂಬಳೆ ಸುಂದರ್ ರಾವ್ ಪಾತ್ರರಾಗಿದ್ದ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸುಂದರ್ ರಾವ್ ಅವರು ಪತ್ನಿ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶವಿದ್ದು ಅಂತ್ಯ ಸಂಸ್ಕಾರ ಗುರುವಾರ ನೆರವೇರಲಿದೆ.
Comments are closed.