ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರದ ತಾಲೂಕಿನಲ್ಲಿ ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿ ಗ್ರಾಮದ ಯುವಕನೊಬ್ಬ ಬಲಿಯಾದ ಘಟನೆ ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು ಪಡೆದಿದೆ.
ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ರಮೇಶ್ ನಾಯಕ ಎಂಬುವರ ಪುತ್ರಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (22) ಚಿರತೆ ದಾಳಿಗೆ ಬಲಿಯಾದವಳು.
ಯುವತಿ ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
ಚಿರತೆ ದಾಳಿ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ತಾಲೂಕು ಜನರಲ್ ಆಸ್ಪತ್ರೆ ಎದುರು ಜಮಾಯಿಸಿ ಚಿರತೆ ಹಿಡಿಯಲು ವಿಫಲರಾದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಅರಣ್ಯಾಧಿಕಾರಿಗಳು ಕಣ್ಗಾವಲು ಹೆಚ್ಚಿಸಿದ್ದರೂ ಚಿರತೆ ಚಲನವಲನ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ವಾರದ ಹಿಂದೆ ಚಿರತೆ ಕಾಣಿಸಿಕೊಂಡ ಕೆಬ್ಬೆಹುಂಡಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
Comments are closed.