ಕರ್ನಾಟಕ

ಕಾಂಗ್ರೆಸ್ಸಿಗೂ ಘಜ್ನಿ ಸಂತತಿಗೂ ಬಹಳವೇ ಸಾಮ್ಯತೆಯಿದೆ: ಬಿಜೆಪಿ ಆರೋಪ

Pinterest LinkedIn Tumblr

ಬೆಂಗಳೂರು: ಭಾರತದ ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಖಜಾನೆಯಾಗಿದ್ದ ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗ ದೇವಾಲಯದ ಮೇಲೆ ಘಜ್ನಿ ಮಹಮ್ಮದ್ 17 ಬಾರಿ ದಾಳಿ ಮಾಡಿದ್ದರೂ ಇಂದಿಗೂ ನಮ್ಮ ಸಂಸ್ಕೃತಿ ಉಳಿದಿದೆ. ಕಾಂಗ್ರೆಸ್ಸಿಗೂ ಘಜ್ನಿ ಸಂತತಿಗೂ ಬಹಳವೇ ಸಾಮ್ಯತೆಯಿದೆ. ಇದರ ವಿರುದ್ಧ ನಿಂತಿದ್ದು ಬಿಜೆಪಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಅಂದು ಘಜ್ನಿಗೆ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲಾಗಲಿಲ್ಲವೋ, ಈಗಲೂ ಘಜ್ನಿ ಮನೋಧರ್ಮದ ಕಾಂಗ್ರೆಸ್‌ಗೆ ನಮ್ಮ ಸಂಸ್ಕೃತಿ, ದೇಶ, ಧರ್ಮವನ್ನು ಹಾಳುಗೆಡವದಂತೆ ಬಿಜೆಪಿ ಸತತವಾಗಿ ತಡೆದಿದೆ.‌ ಖುಷಿಯ ವಿಚಾರವೆಂದರೆ ಇದಕ್ಕೆ ಜನತೆಯ ಆಶೀರ್ವಾದವೂ ವರ್ಷದಿಂದ ವರ್ಷಕ್ಕೆ‌ ಹೆಚ್ಚಾಗಿದೆ.

ದೇಶದ ಜನ ಈ ನೆಲದ ಸಂಸ್ಕೃತಿ, ಪರಂಪರೆ ರಕ್ಷಕರ ಬೆನ್ನಿಗೆ ನಿಲ್ಲುತ್ತಾರೆ ಎಂಬುದಕ್ಕೆ ಗುಜರಾತಿನಲ್ಲಿ ಈ ಬಾರಿ ಬಿಜೆಪಿಗೆ ಜನರು ನೀಡಿದ ಐತಿಹಾಸಿಕ ಗೆಲುವೇ ಸಾಕ್ಷಿ. ಎಷ್ಟೇ ನಕಾರಾತ್ಮಕ ತಂತ್ರಗಳನ್ನು ಮಾಡಿದರೂ ಜನರು ಮತ ಹಾಕುವುದು ಅಭಿವೃದ್ಧಿಗೆ ಮಾತ್ರ ಎಂಬುದು ಸಾಬೀತಾಗಿದೆ.

ಗುಜರಾತ್‌ನಲ್ಲಿ ಜನರು ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಮಣೆ ಹಾಕಿದಂತೆ, ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿಗೆ ಗುಜರಾತ್ ಮಾದರಿಯ ಗೆಲುವನ್ನು ಬಿಜೆಪಿಗೆ ಜನರೇ ನೀಡುವುದು ಖಚಿತ. ಇದೇ ಕಾರಣಕ್ಕೆ ಕಾಂಗ್ರೆಸ್ ಹೆದರಿ ಬಿಜೆಪಿಯ ವಿರುದ್ಧ ದಿನಕ್ಕೊಬ್ಬರಂತೆ ಅಪಸತ್ಯದ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಠೀಕಿಸಿದೆ.

Comments are closed.