ಕರಾವಳಿ

ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಖೈದಿ ಆತ್ಮಹತ್ಯೆ ಬಗ್ಗೆ ತನಿಖೆ ನಡೆಯುತ್ತಿದೆ: ಎಸ್ಪಿ ಅಕ್ಷಯ್ ಎಂ. ಹಾಕೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ/ಉಡುಪಿ: ಬೈಂದೂರು ಒತ್ತಿನೆಣೆಯಲ್ಲಿ ಸುಟ್ಟ ಸ್ಥೀತಿಯಲ್ಲಿ ಪತ್ತೆಯಾದ ವ್ಯಕ್ತಿಯ ಕೊಲೆ ಪ್ರಕರಣದ ಆರೋಪಿ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ತನಿಖೆ ನಡೆಯುತ್ತಿದ್ದು ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎಂದು ಕುಂದಾಪುರದ ಹೆಮ್ಮಾಡಿಯಲ್ಲಿ ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಎಂ. ಹಾಕೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

(ಉಡುಪಿ ಎಸ್ಪಿ)

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್(52) ಕೊಲೆ ಪ್ರಕರಣದ ಆರೋಪಿಯಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದು ಜಿಲ್ಲಾ ಕಾರಾಗೃಹದಲ್ಲಿದ್ದರು. ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡಿದ್ದಾರೆ. ಸರ್ಕಾರದ ಜೈಲು ಅಧೀನದಲ್ಲಿರುವಾಗ ನ್ಯಾಯಾಂಗ ತನಿಖೆ ಮಾಡಿಸಬೇಕಾಗುತ್ತದೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ.
ಈ ಬಗ್ಗೆ ಈಗಾಗಾಲೇ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿಲ್ಲ. ಆತ್ಮಹತ್ಯೆ ಸಂಬಂಧಿಸಿದಂತೆ ಏನಾದರೂ ಮೆಸೇಜ್ ಅಥವಾ ಬೇರೇನಾದರೂ ಕುರುಹು ಬಿಟ್ಟಿದ್ದಾರೆಯೇ ಎಂದು ತನಿಖೆಯಲ್ಲಿ ತಿಳಿಯಲಿದೆ. ಜೈಲಿನಲ್ಲಿ ಅವರೊಂದಿಗಿದ್ದ ವಸ್ತುಗಳನ್ನು ತನಿಖೆ ವೇಳೆ ವಶಕ್ಕೆ ಪಡೆಯಲಾಗಿದೆ. ಈಗಲೇ ಯಾವುದನ್ನು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ…
ಪ್ರಕರಣವೊಂದರಲ್ಲಿ ಶಿಕ್ಷೆ ಆಗುವ ಭಯದಿಂದ ಸದಾನಂದ ಶೇರಿಗಾರ್, ತನ್ನದೇ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದಂತೆ ನಾಟಕದ ಸಂಚು ಮಾಡಿದ್ದು, ಅದಕ್ಕಾಗಿ ತನ್ನ ಪರಿಚಯದ ಶಿಲ್ಪಾ ಜೊತೆ ಸೇರಿ ಕಾರ್ಕಳ ಮೂಲದ ಆನಂದ ದೇವಾಡಿಗ ಎಂಬವರಿಗೆ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಆರೋಪಿಗಳು ಕಾರಿನಲ್ಲಿ ಕಾರ್ಕಳದಿಂದ ಬೈಂದೂರು ಶಿರೂರು ಸಮೀಪದ ಹೇನಬೇರು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿ ಜು.12ರ ನಸುಕಿನ ವೇಳೆ ಕಾರಿಗೆ ಪೆಟ್ರೋಲ್ ಹಾಕಿ ಆನಂದ ದೇವಾಡಿಗ ಸಹಿತ ಕಾರನ್ನು ಸುಟ್ಟು ಕೊಲೆ ಮಾಡಿದ್ದರು.

 

Comments are closed.