ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರ ಕೃಪೆಯಿಂದ ಮುಖ್ಯಮಂತ್ರಿ ಹುದ್ದೆಗೇರಿದ ಬಸವರಾಜ ಬೊಮ್ಮಾಯಿ ಅವರು ಈಗ ಗುರುವನ್ನೇ ಮೂಲೆಗೆ ತಳ್ಳಲು “ಮೀರ್ ಸಾದಿಕ್” ಪಾತ್ರ ನಿರ್ವಹಿಸುತ್ತಿದ್ದಾರೆ! ಎಂದು ಕಾಂಗ್ರೆಸ್ ಟೀಕಿಸಿದೆ.
ಸಿಎಂ ಸ್ಥಾನ ಗಟ್ಟಿಯಾಗುವವರೆಗೆ ವಾರಕ್ಕೊಮ್ಮೆ ದವಳಗಿರಿಗೆ ಹೋಗಿಬರುತ್ತಿದ್ದವರು, ಈಗ ಸಂಘ ಪರಿವಾರದವರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕೇಶವ ಕೃಪಾಗೆ ಹೋಗಿಬರುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪಣ ತೊಟ್ಟಿರುವ ಬಿ.ಎಲ್ ಸಂತೋಷ್ ಅವರ ಬಿ.ಎಸ್.ವೈ ಮುಕ್ತ ಅಭಿಯಾನಕ್ಕೆ ಬೊಮ್ಮಾಯಿಯವರೂ ಕೈಜೋಡಿಸಿದ್ದಾರೆ.
ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ ನಾಯಕನನ್ನೇ ಮುಂದೆ ಬಿಡುವುದು ಸಂಘದ ಕುತ್ಸಿತ ಕಾರ್ಯತಂತ್ರವಾಗಿದೆ. ಅದರಂತೆಯೇ BS Yediyurappa ಅವರನ್ನು ಮೂಲೆಗುಂಪು ಮಾಡುವ ಟಾಸ್ಕ್‌ನ್ನು RSS ಬೊಮ್ಮಾಯಿ ಅವರ ಹೆಗಲಿಗೇರಿಸಿದೆ. ಕುರ್ಚಿ ಉಳಿಸಿಕೊಳ್ಳಲು ಬೊಮ್ಮಾಯಿಯವರು ಗುರುವಿಗೇ ತಿರುಮಂತ್ರ ಹಾಕುತ್ತಿದ್ದಾರೆ. RSS ಕೊಟ್ಟಿರುವ ಟಾಸ್ಕನ್ನು ಬದ್ಧತೆಯಿಂದ ಪಾಲಿಸುತ್ತಿದ್ದಾರೆ.
ಅನೈತಿಕ ಮಾರ್ಗದಲ್ಲಿಯಾದರೂ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ್ದು ಯಡಿಯೂರಪ್ಪ ಅವರು, ಆದರೆ ಅದೇ ಯಡಿಯೂರಪ್ಪ ಅವರಿಗೆ ಬಿಜೆಪಿ ಸಲ್ಲಿಸಿದ ಕೊಡುಗೆ – ಜೈಲು, ಕಣ್ಣೀರು, ದ್ರೋಹ! ಅಡ್ವಾಣಿಯಂತಹ ನಾಯಕರನ್ನೇ ಮುಗಿಸಿದ ಬಿಜೆಪಿ ಬಿ.ಎಸ್.ವೈ ಅವರನ್ನು ಬಿಡುವುದೇ? ಹತ್ತಿದ ಏಣಿಯನ್ನು ಒಡೆಯುವುದು, ತಿಂದ ತಟ್ಟೆಗೆ ಮಣ್ಣು ಹಾಕುವುದು ಬಿಜೆಪಿಯ ಹುಟ್ಟುಗುಣ ಎಂದು ಕಾಂಗ್ರೆಸ್ ಟೀಕಿಸಿದೆ.
Comments are closed.