(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಉಡುಪಿ ಜಿಲ್ಲೆಯ ಚೇರ್ಕಾಡಿ ಎಂಬಲ್ಲಿ ಕಳೆದ ಐದು ವರ್ಷದ ಹಿಂದೆ ಹಣಕ್ಕಾಗಿ ಪೀಡಿಸಿ ಸ್ನೇಹಿತನಿಗೆ ಚೂರಿ ಇರಿದು ಕೊಂದ ಪ್ರಕರಣದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಭೀತಾದ ಹಿನ್ನೆಲೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಾಂತವೀರಪ್ಪ ಅವರು
ಆತನೇ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ಪ್ರಶಾಂತ್ ಕುಲಾಲ್ ಅಲಿಯಾಸ್ ಪಚ್ಚು ಯಾನೆ ಮಣಿ (31) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಪ್ರಕರಣದ ಹಿನ್ನೆಲೆ
2017 ಮಾ.1 ರಂದು ಬೆಳಿಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಪೇತ್ರಿ ಎಂಬಲ್ಲಿರುವ ಅಶ್ವತ್ಥ ಕಟ್ಟೆ ಬಳಿ ಆರೋಪಿ ಪ್ರಶಾಂತ್ ತನ್ನ ಸ್ನೇಹಿತನಾದ ಪ್ರಕಾಶ್ ನಾಯ್ಕ್ (38) ಎನ್ನುವಾತನ ಬಳಿ ಹಣ ನೀಡುವಂತೆ ತಗಾದೆ ತೆಗೆದಿದ್ದು ಹಣ ನೀಡಲು ಒಲ್ಲೆ ಎಂದಿದ್ದಕ್ಕೆ ತನ್ನ ಕಿಸೆಯಲ್ಲಿದ್ದ ಚೂರಿ ತೆಗೆದು ಪ್ರಕಾಶನಿಗೆ ಇರಿದು ಕೊಲೆ ಮಾಡಿದ್ದ. ಕೊಲೆಯಾದ ಪ್ರಕಾಶ್ ದಲಿತನಾಗಿದ್ದು ಕೊಲೆ ಪ್ರಕರಣ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಬ್ರಹ್ಮಾವರ ಪೊಲೀಸರು ಪ್ರಶಾಂತನನ್ನು ಬಂಧಿಸಿದ್ದರು. ಶಿವಮೊಗ್ಗದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ನಾಯ್ಕ್ ಹಾಗೂ ಗಾರೆ ಕೆಲಸ ಮಾಡುತ್ತಿದ್ದ ಪ್ರಶಾಂತ್ ಗೆಳೆಯರಾಗಿದ್ದು ಆಗಾಗ್ಗೆ ಪ್ರಕಾಶ್ ಬಳಿ ಆರೋಪಿ ಹಣ ಪಡೆದುಕೊಂಡಿದ್ದ. ಘಟನೆ ಬಗ್ಗೆ ಕೊಲೆಯಾದ ಪ್ರಕಾಶ್ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಉಡುಪಿ ಉಪವಿಭಾಗದ ಡಿವೈಎಸ್ಪಿ ಎಸ್.ಜೆ ಕುಮಾರಸ್ವಾಮಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 34 ಸಾಕ್ಷ್ಯಾಧಾರಗಳ ಪೈಕಿ 12 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಪೈಕಿ ಪ್ರತ್ಯಕ್ಷದರ್ಶಿಗಳು ನುಡಿದ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿದ್ದು ಆರೋಪಿಗೆ ಶಿಕ್ಷೆಯಾಗುವಲ್ಲಿ ಸಹಕಾರಿಯಾಗಿದೆ.
ಅಪರಾಧಿಗೆ ಕೊಲೆ ಪ್ರಕರಣ (ಐಪಿಸಿ ಸೆಕ್ಷನ್ 302) ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ 3 ವರ್ಷ ಕಾರಾಗೃಹ ಹಾಗೂ 10 ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಾಸಿಕ್ಯೂಶನ್ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು.
ಪೋಕ್ಸೋದಲ್ಲಿ ಅಪರಾಧಿಯಾಗಿ 20 ವರ್ಷ ಜೈಲು..
ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟ ಅಪರಾಧಿ ಪ್ರಶಾಂತ್ ಈ ಹಿಂದೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಶಿಕ್ಷೆಗೊಳಪಟ್ಟಿದ್ದ. 2013ರಲ್ಲಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿ ಬಳಿಕ ಜಾಮೀನು ಪಡೆದು ಹೊರಗಡೆ ಬಂದಿದ್ದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದ್ದಲ್ಲಿದ್ದಾಗಲೇ 2017ರಲ್ಲಿ ಸ್ನೇಹಿತನ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಮತ್ತೆ ಜೈಲು ಸೇರಿದ್ದ. 2018 ಎಪ್ರಿಲ್ ತಿಂಗಳಿನಲ್ಲಿ ಪೋಕ್ಸೋ ಪ್ರಕರಣದ ಅಂತಿಮ ತೀರ್ಪು ಉಡುಪಿಯ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಪ್ರಕಟಗೊಳ್ಳುವ ವೇಳೆ ಗರಿಷ್ಟ ಪ್ರಮಾಣದ ಶಿಕ್ಷೆ ವಿಧಿಸಲು ಅಂದಿನ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಧೀಶರ ಬಳಿ ಮನವಿ ಮಾಡಿದ್ದು 20 ವರ್ಷ ಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸುತ್ತಿದ್ದಂತೆಯೇ ಪ್ರಶಾಂತ್ ತನ್ನ ಎರಡು ಶೂಗಳನ್ನು ನ್ಯಾಯಾಧೀಶರ ಮುಂದೆಯೇ ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಎಸೆದು ಬೆದರಿಕೆ ಕೂಡ ಹಾಕಿದ್ದ. ಈ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.
Comments are closed.