ಉಡುಪಿ: ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಿಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದಲ್ಲಿ ನಡೆದಿದೆ.
ಪೆರ್ಣಂಕಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಎನ್.ಪಿ ಸಿಕ್ಕಿ ಬಿದ್ದ ಗ್ರಾಮ ಲೆಕ್ಕಾಧಿಕಾರಿ.
ನಿವಾಸಿಯೊಬ್ಬರು ಪೆರ್ಣಂಕಿಲ ಗ್ರಾಮದ ಸರ್ವೆ ನಂ 171/1ರಲ್ಲಿ 1.15 ಎಕ್ರೆ ಸ್ಥಳ ಜಮೀನನ್ನು ಸಕ್ರಮ ಮಾಡಿಕೊಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಗೆ ಸಂಬಂಧಪಟ್ಟಂತೆ ಪೆರ್ಣಂಕಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಎನ್.ಪಿ ದೂರುದಾರರಿಗೆ ಜಮೀನು ಸಕ್ರಮ ಮಾಡಿಕೊಡುವುದಕ್ಕೆ 10 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹರೀಶ್ ದೂರುದಾರರಿಂದ ಲಂಚ ಸ್ವೀಕರಿಸುವಾಗ ಸ್ಥಳದಲ್ಲಿಯೇ ರೆಡ್ ಹ್ಯಾಂಡ್ ಸೆರೆಹಿಡಿಯಲಾಗಿದೆ. ಆರೋಪಿಯನ್ನು ಹಾಗೂ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಕೆ. ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಠಾಣಾ ಪ್ರಭಾರ ಪೊಲೀಸ್ ಉಪಾಧೀಕ್ಷಕ ಜಯರಾಮ ಡಿ. ಗೌಡ ನೇತೃತ್ವದಲ್ಲಿ, ಮಂಗಳೂರು ಡಿವೈಎಸ್ಪಿ ಕಲಾವತಿ ಕೆ. ಸಹಭಾಗಿತ್ವದಲ್ಲಿ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದು ಆರೋಪಿತ ಸರ್ಕಾರಿ ನೌಕರ ಹರೀಶ ಎನ್.ಪಿ, ದೂರುದಾರರಿಂದ 10 ಸಾವಿರ ಲಂಚದ ಹಣವನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿಯೇ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಉಡುಪಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ರೋಹಿತ್, ರಮೇಶ್ ದೇವಾಡಿಗ , ಪ್ರಸನ್ನ ದೇವಾಡಿಗ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಮಲ್ಲಿಕಾ, ಪ್ರತಿಮಾ, ಸತೀಶ್ ಆಚಾರಿ, ಸುಧೀರ್, ಸೂರಜ್, ರಾಘವೇಂದ್ರ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.
Comments are closed.