ಕರಾವಳಿ

ಗೋಡಂಬಿ ಫ್ರೈ..ಗ್ವಾಯ್ ಬೀಜ ಫ್ರೈ..ಎಂದು ಕುಂದಾಪುರದಲ್ಲಿ ತಿಂಡಿ-ತಿನಿಸು ಮಾರುತ್ತಿದ್ದ ವಿನಾಯಕ್ ಕಾಮತ್ ವಿಧಿವಶ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಗೋಡಂಬಿ ಫ್ರೈ..ಗೇರು ಬೀಜ ಫ್ರೈ..ಸಾಯಂಕಾಲ ಚಾ ಕುಡುಕೆ… ಅಂತಾ ಅವರು ಕುಂದಾಪುರ ಬೀದಿಗಳಲ್ಲಿ ಓಡಾಡುತ್ತಿದ್ದರೆ ಇವರನ್ನು ನೋಡುವವರು, ಇವರ ಡೈಲಾಗ್ ಕೇಳುವರು ಕೆಲವರಾದರೆ ಮನೆಯಲ್ಲೇ ತಯಾರಿಸಿದ (ಹೋಮ್ ಮೇಡ್) ತಿಂಡಿ ತಿನಿಸು, ಖಾದ್ಯ ಸಹಿತ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮೊದಲಾದವುಗಳನ್ನು ಇವರ ಬಳಿಯಲ್ಲಿ ಖರೀದಿಸುವರು ಹಲವರು.

ಕುಂದಾಪುರ ತಾಲೂಕಿನ ಕುಂಭಾಸಿಯ ನಿವಾಸಿ ವಿನಾಯಕ್ ಕಾಮತ್(64) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತನ್ನದೇ ಶೈಲಿ‌ ಮೂಲಕ ಹೋಂ ಮೇಡ್ ಪ್ರಾಡಕ್ಟ್ ಗಳನ್ನು ಜನರಿಗೆ ಕೈಗೆಟಕುವ ದರದಲ್ಲಿ ನೀಡುತ್ತಿದ್ದವರು. ಈ ವಯಸ್ಸಿನಲ್ಲೂ ಸದಾ ಉತ್ಸಾಹಿಯಾಗಿದ್ದರು.

ವಿನಾಯಕ್ ಕಾಮತ್ ಒಂದಷ್ಟು ಬ್ಯಾಗ್, ವಸ್ತುಗಳು ತುಂಬಿದ ಡಬ್ಬಿ ಹಿಡಿದು ತಲೆಗೊಂದು ಕ್ಯಾಪ್ ಧರಿಸಿ ಮನೆಯಿಂದ ಬೆಳಿಗ್ಗೆ ಹೊರಟರೆ ಕುಂದಾಪುರ, ಕೋಟೇಶ್ವರ, ಬ್ರಹ್ಮಾವರ ಸಹಿತ ಹಲವೆಡೆ ಅವರ ಕಾರ್ಯಕ್ಷೇತ್ರವಿದೆ. ಬಹುತೇಕ ಕಿಲೋಮೀಟರ್ ಗಟ್ಟಲೇ ನಡೆದು ಸಾಗುವುದು ಇವರ ಇನ್ನೊಂದು ಹವ್ಯಾಸ. ಹೋಗುವ ಕಡೆಯಲ್ಲಿ ‘ವಿನಾಯಕ್ ಮಾಮ್’ ಆಗಮನಕ್ಕಾಗಿಯೇ ಕಾಯುವ ಇವರ ಪ್ರೀತಿಯ ಗ್ರಾಹಕರು ಕೂಡ ಬಹುತೇಕರಿದ್ದಾರೆ. ಕುಂಭಾಸಿಯ ವಿನಾಯಕ್ ಕಾಮತ್ ಮೊದಲಿಗೆ ಸರ್ಕಾರದ ಅಧೀಕೃತ ಲಾಟರಿ ಟಿಕೆಟ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಅದು ಬ್ಯಾನ್ ಆದ ಬಳಿಕ ಹಲವು ವರ್ಷಗಳಿಂದ ಸ್ವ ಉದ್ಯಮ ಮಾಡಿಕೊಂಡಿದ್ದರು.

ಕುಂದಾಪುರ, ಬ್ರಹ್ಮಾವರ ಪರಿಸರದಲ್ಲಿ ಹುರಿದ ಗೋಡಂಬಿ, ಕಡ್ಲೆಬೀಜ, ಹಾಗಲಕಾಯಿ ಉಪ್ಪಿನಕಾಯಿ ಸಹಿತ ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತಿದ್ದ ತಮ್ಮ ವಿಭಿನ್ನ ಶೈಲಿಯ ಮಾತಿನ ಮೂಲಕ ಜನರನ್ನು ಆಕರ್ಷಿಸುತ್ತಿದ್ದು ಕಾಮತ್ ಮಾಮ್ ಎಲ್ಲರ ಪ್ರೀತಿಪಾತ್ರರಾಗಿದ್ದರು.

ಮೃತ ವಿನಾಯಕ್ ಕಾಮತ್ ಅವರು ಪತ್ನಿ, ಇಬ್ಬರು ಪುತ್ರರು, ಬಂಧು-ಬಳಗ, ಹಿತೈಷಿಗಳನ್ನು ಅಗಲಿದ್ದಾರೆ.

Comments are closed.