ಕರಾವಳಿ

ಕೋಟೇಶ್ವರದಲ್ಲಿ ಅಗ್ನಿ ಅನಾಹುತ; ಎರಡು ಅಂಗಡಿ ಸಂಪೂರ್ಣ ಭಸ್ಮ; 3 ಲಕ್ಷ ನಗದು ಸಹಿತ ಕೋಟಿ ರೂ. ನಷ್ಟ ಶಂಕೆ

Pinterest LinkedIn Tumblr

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವವಸ್ಥಾನ ಎದುರಿನ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಎರಡು ಫ್ಯಾನ್ಸಿ ಸ್ಟೋರ್ ಸಂಪೂರ್ಣ ಸುಟ್ಟು ಭಸ್ಮ ವಾಗಿದ್ದು, ಬಟ್ಟೆಯಂಗಡಿ, ವಾಸದ ಮನೆ ಭಾಗಶಃ ಸುಟ್ಟು ಕರಕಲಾಗಿದೆ.

ಕೋಟೇಶ್ವರ ಶಿವರಾಮ ಪೂಜಾರಿ ಎನ್ನುವರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆಗೆ ನೀಡಲಾಗಿದ್ದ ಅಂಗಡಿಕೋಣೆಯಲ್ಲಿ ಸುಧಾಕರ ಜೋಗಿ ಎಂಬವರ ಎರಡು ಮಹಾಲಕ್ಷ್ಮೀ ಕಂಗನ್ ಶಾಪ್ ಹಾಗೂ ಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಅಂಗಡಿ ಹಾಗೂ‌‌ ಕಟ್ಟಡದ ಮೇಲಂತಸ್ತಿನಲ್ಲಿದ್ದ ಶಿವರಾಮ ಪೂಜಾರಿ ವಾಸದ ಮನೆ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ.

ಸುಧಾಕರ ಜೋಗಿ ಸೇರಿದ ಫ್ಯಾನ್ಸಿ ಸೇರಿ ಇತರ ಪರಿಕರ ಸ್ಟಾಕ್ ಇಟ್ಟಿದ್ದು, ಬಾಗಿಲು ಹಾಕಿ ಊಟಕ್ಕೆ ಹೋದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಿಂದ ಹೊಗೆ ಬರುತ್ತಿರುವುದ ನೋಡಿದ ಸ್ಥಳೀಯರು ಸುಧಾಕರ ಜೋಗಿಗೆ ಮಾಹಿತಿ ನೀಡಿದ್ದಾರೆ. ಅಂಗಡಿ ಮಾಲೀಕರು ಬಂದು ಅಂಗಡಿ ಕೋಣೆ ಬಾಗಿಲು ತೆರೆಯುವಷ್ಟರಲ್ಲಿ ಬೆಂಕಿ ಎಲ್ಲವನ್ನೂ ನಾಶಪಡಿಸಿತ್ತು. ಫ್ಯಾನ್ಸಿ ಹಾಗೂ ಪ್ಲಾಸ್ಟಿಕ್ ಐಟಮ್ ಇದ್ದುದ್ದರಿಂದ ಬೆಂಕಿ ಬಹುಬೇಗ ಇಡೀ ಅಂಗಡಿ ಕೋಣೆ ಆವರಿಸಿ, ನೋಡು ನೀಡುತ್ತಿದ್ದಂತೆ ಎಲ್ಲವೂ ಭಸ್ಮವಾಗಿದೆ.  ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಸ್ಟೋರ್ ಎರಡು ಮಳಿಗೆ ತಾಗಿಕೊಂಡಿದ್ದ, ರಾಜೀವ ಶೆಟ್ಟಿ ಎಂಬವರಿಗೆ ಸೇರಿದ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಅಂಗಡಿಗೂ ಬೆಂಕಿ ವಿಸ್ತಿರಿಸಿಕೊಂಡಿದ್ದು,  ಅಂಗಡಿ ಮಾಲೀಕರು ಊಟಕ್ಕೆ ಹೋದ ಸಮಯದಲ್ಲೇ ಬೆಂಕಿ ಬಿದ್ದಿದ್ದು, ಅಂಗಡಿಯಲ್ಲಿದ್ದ ಬಟ್ಟೆ ಬಟ್ಟೆಹೊಲಿಯವ ಯಂತ್ರ ಎಲ್ಲವೂ ಸುಟ್ಟು ಕರಕಲಾಗಿದೆ. ಅಂಗಡಿ ಮೇಲ್ಬಾಗದಲ್ಲಿರುವ ಶಿವರಾಮ ಪೂಜಾರಿ ವಾಸದ ಮನೆ ನೆಲ ಹಾಸು, ಶೆಟರ್, ಕಿಟಕಿ ಸುಟ್ಟು ಹೋಗಿದೆ.

ಲಕ್ಷಾಂತರ ರೂ. ನಷ್ಟ- ಬೆಂಕಿ ನಂದಿಸಲು ಹರಸಾಹಸ
ಸುಧಾಕರ್ ಜೋಗಿಯವರ ಪ್ಯಾನ್ಸಿ ಸ್ಟೋರ್‌ನಲ್ಲಿದ್ದ 3 ಲಕ್ಷ ನಗದು ಹಾಗೂ ಸುಟ್ಟ ಪರಿಕರದ ಮೌಲ್ಯ 60 ಲಕ್ಷ ರೂ ಆಗಿದೆ ಎನ್ನಲಾಗಿದ್ದು ಬಟ್ಟೆಯಂಗಡಿ ಮಾಲೀಕರಿಗೆ 3 ಲಕ್ಷ ಹಾನಿ ಹಾಗೂ ವಾಸದ ಮನೆಗೆ 8 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿ ಕಾಣಿಸಿದ್ದು, ಪರಿಸರದ ನಾಗರಿಕರು ಅಗ್ನಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಪರಿಸರ ವಾಸಿಗಳು ಹರಸಾಹಸದಿಂದ ಸಂಜೆ ಆರುಗಂಟೆ ಸುಮಾರಿಗೆ ಬೆಂಕಿ ಹತೋಟಿಗೆ ತಂದರೂ ಕೂಡ ಅಷ್ಟರಲ್ಲಾಗಲೇ ವ್ಯಾಪಕ ಹಾನಿ ಸಂಭವಿಸಿತ್ತು.

Comments are closed.