ಕರ್ನಾಟಕ

ಮೆಟ್ರೋ ಪಿಲ್ಲರ್ ದುರಂತ: ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸುವವರೆಗೂ ಶವ ತೆಗೆದುಕೊಳ್ಳಲ್ಲ; ಮೃತ ತೇಜಸ್ವಿನಿ ತಂದೆ

Pinterest LinkedIn Tumblr

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಕಂಡ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆಯಲ್ಲಿ ಲೋಹಿತ್‌ ಎನ್ನುವರ ಪತ್ನಿ ತೇಜಸ್ವಿನಿ ಹಾಗೂ ಎರಡೂ ವರ್ಷದ ಪುತ್ರ ವಿಹಾನ್‌ ಸಾವನ್ನಪ್ಪಿದ್ದಾರೆ, ನೆಗ್ಲಿಜೆನ್ಸಿ ಆರೋಪದಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ನಡೆದ ದುರಂತದಲ್ಲಿ ತಾಯಿ ಮಗು ಸಾವನ್ನಪ್ಪಿದ್ದು, ತಂದೆ ಮತ್ತು ಮಗಳು ಅಪಾಯದಿಂದ ಪಾರಾಗಿದ್ದಾರೆ.

ಇದೇ ವೇಳೆ ಮೃತ ತೇಜಸ್ವಿನಿ ತಂದೆ ಮದನ್ ಕುಮಾರ್ ಕಟ್ಟಡ ಕಾಮಗಾರಿ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ. ಕಾಮಗಾರಿ ನಡೆಸಲು ಗುತ್ತಿಗೆ ರದ್ದು ಪಡಿಸುವವರೆಗೂ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗುತ್ತಿಗೆದಾರರ ಪರವಾನಿಗೆ ರದ್ದು ಪಡಿಸುವವರೆಗೆ ಶವವನ್ನು ತೆಗೆದುಕೊಳ್ಳುವುದಿಲ್ಲ, ಇಷ್ಟು ಎತ್ತರದ ಪಿಲ್ಲರ್‌ಗಳನ್ನು ನಿರ್ಮಿಸಲು ಅನುಮತಿ ನೀಡಿದವರು ಯಾರು? ಟೆಂಡರ್ ರದ್ದುಪಡಿಸಿ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಮದನ್ ಕುಮಾರ್ ಆಗ್ರಹಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಪತಿ ಲೋಹಿತ್, ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಕೋರಿದ್ದಾರೆ. ಸರ್ಕಾರಕ್ಕೆ ಏನು ಹೇಳಲಿ, ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು. ಬೇರೆ ಯಾರಿಗೂ ಈ ರೀತಿ ಪರಿಸ್ಥಿತಿ ಬಾರದಂತೆ ಸರ್ಕಾರ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆವು, ನಾನು ಅವರನ್ನು ಸಂಬಂಧಪಟ್ಟ ಸ್ಥಳದಲ್ಲಿ ಇಳಿಸಿ ನಂತರ ಅಲ್ಲಿಂದ ಹೊರಡಬೇಕಿತ್ತು. ಆದರೆ ಈ ಘಟನೆ ಕೇವಲ ಒಂದು ಸೆಕೆಂಡ್‌ನಲ್ಲಿ ನಡೆದುಹೋಯಿತು, ಹಿಂದೆ ಕುಳಿತಿದ್ದ ನನ್ನ ಹೆಂಡತಿ ಮತ್ತು ಮಗು ಕೆಳಗೆ ಬಿದ್ದಿದ್ದರು ಎಂದು ದುರಂತದ ಬಗ್ಗೆ ಲೋಹಿತ್ ವಿವರಿಸಿದರು.

Comments are closed.