ಉಡುಪಿ: ಕಡಲ ತೀರದ ತುಳುನಾಡಿನ ಪುಣ್ಯಭೂಮಿ ಉಡುಪಿಯಲ್ಲಿ 1961 ರಲ್ಲಿ ಸಾದ್ವಿ ಸೀತಮ್ಮನವರು ಸ್ಥಾಪಿಸಿದ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪುನರ್ ನಿರ್ಮಾಣವಾಗಿ 2023 ಜನವರಿ 15 ಮತ್ತು 16ನೇ ತಾರೀಕಿನಂದು ಪುನರ್ ಪ್ರತಿಷ್ಠೆಗಾಗಿ ಮುಂಬೈಯ ವಜ್ರೇಶ್ವರಿಯಿಂದ ತಯಾರಿಸಿ ತರಲಾದ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಪ್ರತಿಮೆಯನ್ನು ಉಡುಪಿಯ ಕೊಡವೂರಿನಲ್ಲಿರುವ ಶ್ರೀ ಸಾಯಿ ಮಂದಿರದಿಂದ ಭವ್ಯ ರಥದಲ್ಲಿ ಮೆರವಣಿಗೆಯ ಮೂಲಕ ಉಡುಪಿಗೆ ತರಲಾಯಿತು.
ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮಿಜಿಯರಿಂದ ಮಂಗಾಳಾರತಿಯೊಂದಿಗೆ ಡಾ. ರಂಜನ್ ಪೈ ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಹಾಗೂ ಸ್ವಾಮಿ ನಿತ್ಯಾನಂದ ಆಶ್ರಮ ಪಬ್ಲಿಕ್ ಟ್ರಸ್ಟ್ ಕಾಂನಂಗಾಡ್ ಕಾರ್ಯಧ್ಯಕ್ಷರು ಶ್ರೀ ಕೆ. ದಿವಾಕರ್ ಶೆಟ್ಟಿ ಹಾಗೂ ಮಂದಿರ ಕಾರ್ಯಕಾರಿ ಸಮಿತಿಯ ತಂಡದ ನೇತ್ರತ್ವದಲ್ಲಿ ೨೦೨೩ ಜನವರಿ ೧೫ನೇ ತಾರೀಕು ಸಂಜೆ ೪.೦೦ ಗಂಟೆಯಿಂದ ಪ್ರಾರಂಭವಾಯಿತು.
ಉಡುಪಿಯ ಜೋಡುಕಟ್ಟೆ ಡಯಾನ ಸರ್ಕಲ್ ಮೂಲಕ ಮುಖ್ಯ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಕವಿ ಮುದ್ದಣ ಮಾರ್ಗದಲ್ಲಿ ಪುನರ್ ನಿರ್ಮಾಣದ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದವರೆಗೆ ಅತೀ ವಿಜೃಂಬಣೆಯಿಂದ ನಡೆಯಿತು.
ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಅನಾವರಣ
ಶ್ರೀ ಕೃಷ್ಣ ದೇವರ ಸಾನಿಧ್ಯ ಇರುವ ಉಡುಪಿಯಲ್ಲಿ ಮಕರ ಸಂಕ್ರಾಂತಿಯ ಶುಭ ದಿನಗಳಲ್ಲಿ ಭವ್ಯ ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಅನಾವರಣವಾಗಿ ಸಹಸ್ರಾರು ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ಜನಸ್ತೋಮ ಸಾಕ್ಷಿಯಾದರು.
ಕೇರಳದ ಚೆಂಡೆವಾದ್ಯ, ಪಂಚವಾದ್ಯ, ನಾಗಸ್ವರ, ಮಹಿಳಾ ಚೆಂಡೆ ವಾದಕರ ತಂಡ, ಬೃಹತ್ ಮಾರುತಿ, ಬಣ್ಣ ಬಣ್ನದ ವೇಷಗಳು, ವಿವಿಧ ಊರುಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಜನಾ ತಂಡ, ಸುಮಂಗಲೆಯರು, ಮಹಿಳಾ ಸಂಘಟನೆಯ ಸದಸ್ಯರು, ಶ್ರೀ ಕೃಷ್ಣ ಪಂಥದ ಸದಸ್ಯರು, ಭವ್ಯ ಅಲಂಕೃತ ಪುಷ್ಪ ಮಂಟಪದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಗಳ ಪ್ರತಿಷ್ಠಾಪನಾ ಮೂರ್ತಿಯ ಮೆರವಣಿಗೆ ಭಕ್ತಿ ಭಾವ ಶ್ರೀಮಂತ ಸಂಸ್ಕೃತಿಯ ಪರಾಕಷ್ಠೆಗೆ ತಲುಪಿತ್ತು. ಉಡುಪಿಯಲ್ಲಿ ನಾದ ವೈಭದ ವಿವಿಧ್ಯಮಯ ವಾಧ್ಯಗಳ ಶಬ್ಧ ಪ್ರತಿಧ್ವನಿಸಿತ್ತು.
ದಾರಿಯುದ್ದಕ್ಕೂ ಸಿಂಗರಿಸಿದ ವಿದ್ಯುತ್ ದೀಪಾಲಂಕಾರ ವಿಶೇಷ ಆಕರ್ಷಣೆಯ ನಡುವೆ ಸಾಗಿಬಂದ ಮೆರವಣಿಯ ತಂಡ ಹಾಗೂ ಭವ್ಯ ಮೂರ್ತಿಯನ್ನು ನೂತನ ಮಂದಿರದ ಅವರಣದಲ್ಲಿ ಸುಮಂಗಲೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಪ್ರತಿಮೆ ಜನವರಿ ೧೬ನೇ ತಾರೀಕು ಬೆಳಿಗ್ಗೆ ೬.೦೦ ಗಂಟೆಯಿಂದ ಪುಣ್ಯಾಹ ಪ್ರತಿಷ್ಠಾಕಲಶ ಆದಿವಾಸ ಹೋಮ, ಮಹಾಗಣಪತಿಯಾಗ, ಪುನಪ್ರತಿಷ್ಠೆ, ಜೀವ ಕಲಶಾಭಿಷೇಕ, ೧೦೮ ಕಲಶ ಸಹಿತ ಸಾನಿಧ್ಯ ಕಲಶೋತ್ಸವ ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲ ಪೂಜಾ ವಿದಿ ವಿಧಾನಗಳು ನಡೆದು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ದರ್ಶನಕ್ಕೆ ಉಡುಪಿಯಲ್ಲಿ ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಆಗಮಿಸುವ ಎಲ್ಲಾ ಭಕ್ತಾಧಿಗಳಿಗೆ ಮಹಾ ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ವರದಿ- ಬಿ. ಕೆ. ಗಣೇಶ್ ರೈ
Comments are closed.