ಕರಾವಳಿ

ಅಪಘಾತದಲ್ಲಿ ಮಗನನ್ನು ಕಳೆದುಕೊಂಡು ದಿಕ್ಕುತೋಚದ ಕುಟುಂಬ | ನೆರವಿನ ನಿರೀಕ್ಷೆಯಲ್ಲಿ ವಯೋವೃದ್ಧ ದಂಪತಿಗಳು

Pinterest LinkedIn Tumblr

ಕುಂದಾಪುರ: ಬಡತನದಲ್ಲಿಯೂ ಕಷ್ಟಪಟ್ಟು ಬದುಕುತ್ತಿದ್ದ ಕುಟುಂಬ. ಆ ಕುಟುಂಬಕ್ಕೆ ಆಧಾರವಾಗಿ ಬೆನ್ನೆಲುಬಾಗಿದ್ದ ಮಗ ಅನಿರೀಕ್ಷಿತವಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದು ನಮ್ಮ ಮುಂದಿನ ಗತಿ ಏನು ಎಂಬ ಚಿಂತೆಯಲ್ಲಿ ವಯೋವೃದ್ಧ ದಂಪತಿಗಳಿದ್ದಾರೆ.

ಹುಣ್ಸೆಮಕ್ಕಿ ಹೊಂಬಾಡಿ ಗ್ರಾಮದ ಗೋಪಾಲಕೃಷ್ಣ ನಗರದ ಪ್ರಶಾಂತ್ ಮೊಗವೀರ(31) ಇವರು ಡಿ.26ರಂದು ಕೆಲಸದ ನಿಮಿತ್ತ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡು ಹೋಗುವಾಗ ಬೈಕಿಗೆ ಹಿಂಬದಿಯಿಂದ ಕ್ರೇನ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಮಾನಸಿಕ ವೇದನೆಯ ಜೊತೆಯಲ್ಲಿ ಆರ್ಥಿಕ ಸಂಕಷ್ಟದ ಹೊರೆ ನಡುವೆ ಕುಟುಂಬ ನಿರ್ವಹಣೆ ಹೇಗೆ ಎಂಬ ತೋಳಲಾಟದಲ್ಲಿ ದಂಪತಿಗಳಿದ್ದಾರೆ.

ಕಡು ಬಡತನದಲ್ಲಿಯೂ ವಯಸ್ಸಾದ ತಂದೆ ತಾಯಿ ಸಹೋದರಿಯನ್ನು ಸಲುಹುವ ಜವಾಬ್ದಾರಿ ಹೊತ್ತಿದ್ದ ಪ್ರಶಾಂತ್ ಇಡೀ ಸಂಸಾರದ ನೊಗವನ್ನು ಎಳೆಯುತ್ತಿದ್ದರು. ಆದರೀಗ ಮಗನಿಲ್ಲದೇ ವಯೋವೃದ್ಧರಿಗೆ ಜೀವನಪೂರ್ತಿ ಕಷ್ಟದ ಪರಿಸ್ಥಿತಿಯಲ್ಲಿ ಬದುಕುವ ಸ್ಥಿತಿ ಎದುರಾಗಿದೆ.

ಅಶಕ್ತ ವಯೋವೃದ್ಧರು: ಪ್ರಶಾಂತ್ ಮೊಗವೀರ ಇವರ ತಂದೆ ಸೋಮ ಮೊಗವೀರ ಇವರು ಈಗಾಗಲೇ ಮಣಿಪಾಲದ ಕೆಎಮ್ಸಿ ಆಸ್ಪತ್ರೆಯಲ್ಲಿ ನರರೋಗ, ಬೆನ್ನು ಮೂಳೆ ಸವೆತ, ಮೂಗಿಗೆ ಸಂಬಂಧಪಟ್ಟ ಕೆಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದಲ್ಲದೇ ಅವರ ತಾಯಿ ಹಲವು ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಮಾಸಿಕ ಔಷಧಿ ಖಚಿ೯ಗೆ ಸಾವಿರಾರೂ ರೂಪಾಯಿ ಹಣ ವ್ಯಯಿಸಬೇಕಾಗಿದೆ. ಒಂದು ಕಡೆ ವೃದ್ಯಾಪ್ಯದ ಬದುಕು, ಇನ್ನೊಂದು ಕಡೆ ದುಡಿಯಲು ಅಶಕ್ತವಾದ ಕೈಗಳು. ಇದರ ನಡುವೆ ಜೀವನದ ಮುಂದಿನ ಪಾಡು ಏನು ಎಂಬ ಕೊರಗು ವೃದ್ಧ ದಂಪತಿಯನ್ನು ಕಾಡುತ್ತಿದೆ.

ಅರ್ಧಕ್ಕೆ ನಿಂತ ಮನೆ: ಪ್ರಶಾಂತ್ ಮೊಗವೀರ ಸಾಲ ಮಾಡಿ ಕಟ್ಟುತ್ತಿದ್ದ ಮನೆಯೂ ಕೂಡ ಇದೀಗ ಅರ್ಧಕ್ಕೆ ನಿಂತಿದೆ. ಕಷ್ಟಜೀವಿಯಾಗಿದ್ದ ಪ್ರಶಾಂತ್ ಚಾಲಕ ವೃತ್ತಿಯ ಜೊತೆಯಲ್ಲಿ ಫ್ಲೆಕ್ಸ್ ಬ್ಯಾನರ್ ಕಟ್ಟುವ ಕೆಲಸ ಮಾಡಿಕೊಂಡು ಮನೆಯನ್ನು ಸಂಪೂರ್ಣಗೊಳಿಸುವ ಕನಸು ಕಂಡಿದ್ದರು. ಆದರೆ ವಿಧಿಯ ಕ್ರೂರಲೀಲೆಗೆ ಬಲಿಯಾಗಿ, ಕಟ್ಟುತ್ತಿರುವ ಮನೆಯೂ ಕೂಡ ಇದೀಗ ಅರೆಬರೆಯಾಗಿ ನಿಂತಿದೆ. ಮಗನಿಲ್ಲದ ಮನೆ ನೋಡಿದರೆ ಮಾತು ಮೌನವಾಗುತ್ತದೆ. ಕಣ್ಣುಗಳು ಒದ್ದೆಯಾಗುತ್ತದೆ. ಮನ ಮರುಕ ಹುಟ್ಟಿಸುತ್ತದೆ.

ಈ ವಯೋವೃದ್ಧ ದಂಪತಿಗಳ ಕುಟುಂಬಕ್ಕೆ ಆಸರೆಯಾಗಲು ಬಯಸುವ ದಾನಿಗಳು ಪ್ರಂಶಾತ್ ಮೊಗವೀರ ಇವರ ತಂದೆ ಸೋಮ ಮೊಗವೀರ ಇವರ ಬ್ಯಾಂಕ್ ಖಾತೆಗೆ ನೆರವು ನೀಡಬಹುದು. ಬ್ಯಾಂಕ್ ಖಾತೆಯ ವಿವರ ಸೋಮ ಮೊಗವೀರ, ಬ್ಯಾಂಕ್ ಆಫ್ ಬರೋಡಾ ಸಳ್ವಾಡಿ ಶಾಖೆ, ಎಸ್ಬಿ ಖಾತೆ ನಂಬರ್ 81840100003721, ಐಎಫ್ಎಸ್ಸಿ ಕೋಡ್: ಬಿಎಆರ್ಬಿ0ವಿಜೆಎಸ್ಎಎಲ್ವಿ. ಗೋಗಲ್ ಪೇ ಮತ್ತು ಪೋನ್ ಪೇ ನಂ:9743117917(ಪ್ರಶಾಂತ್ ಮೊಗವೀರ). ಮಾಹಿತಿಗಾಗಿ ಸಂಪಕಿ೯ಸುವ ದೂರವಾಣಿ ಸಂಖ್ಯೆ 9611030305.

Comments are closed.