ಉಡುಪಿ: ಮಹಿಳೆಯೋರ್ವರು ಗೋವಾದ ಪಣಜಿಯಿಂದ ಸಾಸ್ತಾನ ಐರೋಡಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಸಂಭವಿಸಿದೆ. ಈ ಬಗ್ಗೆ ಕೋಟ ಪೊಲೀಸ್ ಅಟಾಣೆ ವ್ಯಾಪ್ತಿಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ಐರೋಡಿ ನಿವಾಸಿ ಸಂಗೀತಾ ಭಟ್ ಎನ್ನುವರು ಚಿನ್ನಾಭರಣ ಕಳೆದುಕೊಂಡವರು.
ಅವರು ಕಳೆದ ಡಿ.24ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಪಣಜಿಯಿಂದ ಪುತ್ತೂರಿಗೆ ಹೊರಡುವ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಊರಿಗೆ ಪ್ರಯಾಣಿಸುತ್ತಿರುವಾಗ ಟ್ರಾಲಿ ಬ್ಯಾಗ್‌ನಲ್ಲಿ ಬಟ್ಟೆ ಬರೆ ಹಾಗೂ ಅದರ ಒಳಗಡೆ ಸಣ್ಣ ವಸ್ತ್ರದ ಚೀಲದಲ್ಲಿ ಚಿನ್ನಾಭರಣ ಇಟ್ಟು ಬ್ಯಾಗಿಗೆ ಬೀಗ ಹಾಕಿ ಕುಳಿತ ಸೀಟಿನ ಕೆಳಗಡೆ ಇಟ್ಟುಕೊಂಡಿದ್ದರು. ತನ್ನೂರು ಬಂದಾಗ ಮಾಬುಕಳದಲ್ಲಿ ಅವರು ಇಳಿದಿದ್ದು, ಮರುದಿನ ಬೆಳಗ್ಗೆ ಮನೆಯಲ್ಲಿ ಬ್ಯಾಗ್ ನೋಡಿದಾಗ ಅದರಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಬಸ್‌ನಲ್ಲಿ ಹಿಂದೆ ಕುಳಿತಿರುವ ಹಿಂದಿ ಮಾತನಾಡುವ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನವಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
Comments are closed.