ಉಡುಪಿ: ಇಲ್ಲಿನ ಸಾಸ್ತಾನ ಪಾಂಡೇಶ್ವರ ಗ್ರಾಮದ ಮಠದ ತೋಟ ಎನ್ನುವಲ್ಲಿ ಬೆಂಗಳೂರಿನಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದ ರಾಜೇಶ ಪೂಜಾರಿಯವರ ಮನೆಯಲ್ಲಿ 2022 ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ಲಕ್ಷಾಂತರ ರೂ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಜಿಲ್ಲೆಯ ವಿಶೇಷ ಪೊಲೀಸರ ತಂಡ ಯಶಸ್ವಿಯಾಗಿದ್ದು, ವಿಚಾರಣೆ ವೇಳೆ ಇವರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮನೆಕಳವು, ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಕಾಪು ಎಲ್ಲೂರು, ಮಂಜರಬೆಟ್ಟು ನಿವಾಸಿ ರಾಜೇಶ್ ದೇವಾಡಿಗ (38) ಹಾಗೂ ಕಾರ್ಕಳದ ಈದು ಹೊಸ್ಮಾರಿನ ನಿವಾಸಿ ಮೊಹಮ್ಮದ್ ರಿಯಾಜ್ ಹೊಸ್ಮಾರ್ (39) ಬಂಧಿತ ಆರೋಪಿಗಳು.
ಜಿಲ್ಲಾ ಎಸ್.ಪಿ.ಯವರಿಂದ ನಿಯೋಜಿತಗೊಂಡ ಪೊಲೀಸ್ ತಂಡವು ರಾತ್ರಿ ಮನೆ ಕಳ್ಳತನ ಪ್ರಕರಣದ ಹಳೆಯ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನ ಮೇಲೆ ನಿಗಾ ಇರಿಸಿದ್ದು ತಾಂತ್ರಿಕ ಮಾಹಿತಿ ಹಾಗೂ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ಸಂಶಯಾಸ್ಪದ ಆರೋಪಿಗಳ ಮೇಲೆ ನಿಗಾವಹಿಸಲಾಗಿತ್ತು. ಜ.22ರಂದು ಕೋಟ ಠಾಣಾ ವ್ಯಾಪ್ತಿಯ ಸಾೖಬ್ರಕಟ್ಟೆ ಬಳಿ ಖಚಿತ ಮಾಹಿತಿಯಂತೆ ವಾಹನ ತಪಾಸಣೆ ನಡೆಸುವ ಸಂದರ್ಭ ಪೋರ್ಡ್ ಮಾಂಡಿಯೋ ಕಾರನಲ್ಲಿ ರಾಜೇಶ ದೇವಾಡಿಗ ಮತ್ತು ಮೊಹಮ್ಮದ್ ರಿಯಾಜ್ ಹೊಸ್ಮಾರ್ ಪ್ರಯಾಣಿಸುತ್ತಿರುವುದು ಪ್ರಯಾಣಿಸುತ್ತಿರುವುದು ಕಂಡು ಬಂದಿದ್ದು, ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಿಚಾರಿಸಿದಾಗ ಸಾಸ್ತಾನದ ಚರ್ಚ್ ಬಳಿ ಒಂದು ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳಾಗಿರುವುದಾಗಿ ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಕಡೆಗೆ ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ರಾಜೇಶ್ ದೇವಾಡಿಗ ಈ ಹಿಂದೆ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದ. ಈಗಾಗಲೇ ಈತನ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಶಿರ್ವ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 4 ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ರಿಯಾಜ್ ಹೊಸ್ಮಾರ್ ಕಾರ್ಕಳದ ಪ್ಲೋರಿನ್ ಮಚಾದೋ ರವರ ಕೊಲೆ ಹಾಗೂ ಸುಲಿಗೆ ಪ್ರಕರಣ ಹಾಗೂ 2021 ರಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ನಡೆದ ಪ್ರಮುಖ ಪ್ರಕರಣವಾದ ಮಂಜೇಶ್ವರದ ರಾಜಧಾನಿ ಜ್ಯುವೆಲರ್ಸ್ ದರೋಡೆ ಪ್ರಕರಣದ ಆರೋಪಿಯಾಗಿರುತ್ತಾನೆ. ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು.
19 ಲಕ್ಷ ಮೌಲ್ಯದ ಸ್ವತ್ತು ವಶ:
ಆರೋಪಿಗಳಿಂದ ಕಳ್ಳತನ ನಡೆಸಿದ ಸುಮಾರು 15 ಲಕ್ಷದ ಚಿನ್ನಾಭರಣ, ಕಳ್ಳತನದ ಹಣದಿಂದ ಖರೀದಿಸಿದ ಸುಮಾರು 2 ಲಕ್ಷ 50 ಸಾವಿರ ಮೌಲ್ಯದ ಪೋರ್ಡ್ ಮಾಂಡಿಯೋ ಕಾರು, ಸುಮಾರು 1 ಲಕ್ಷ ಮೌಲ್ಯದ ಹಿರೋ ಕಂಪೆನಿಯ ಡೆಸ್ಟೀನಿ ಬೆ„ಕ್ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 50 ಸಾವಿರ ಮೌಲ್ಯದ ಹೊಂಡಾ ಆ್ಯಕ್ಟೀವ್ ಸ್ಕೂಟರ್ ಸೇರಿದಂತೆ ಒಟ್ಟು 19 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಚರಣೆಗೆ ವಿಶೇಷ ತಂಡ..
ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ.ಎಚ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಪೊಲೀಸ್ ಉಪಾಧೀಕ್ಷಕ ದಿನಕರ ಪಿ.ಕೆ., ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣೆ ಪಿ.ಎಸ್. ಐ. ಮಧು ಬಿ.ಈ., ತನಿಖಾ ಪಿ.ಎಸ್.ಐ. ಪುಷ್ಪಾ, ಪ್ರೋಬೇಷನರಿ ಪಿ.ಎಸ್.ಐ. ನೂತನ್ ಡಿ.ಈ., ಕೋಟ ಠಾಣಾ ಠಾಣೆ ಸಿಬಂದಿ ಎ.ಎಸ್.ಐ ರವಿಕುಮಾರ್, ರಾಘವೇಂದ್ರ, ಪ್ರಸನ್ನ, ಬ್ರಹ್ಮಾವರ ಠಾಣೆಯ ವೆಂಕಟರಮಣ ದೇವಾಡಿಗ, ಸಂತೋಷ ರಾಥೋಡ್, ಬ್ರಹ್ಮಾವರ ವೃತ್ತ ಕಚೇರಿಯ ಎ.ಎಸ್.ಐ ಕೃಷ್ಣಪ್ಪ, ಪ್ರದೀಪ ನಾಯಕ್ ಮತ್ತು ಜಿಲ್ಲಾ ಸಿಡಿಆರ್ ವಿಭಾಗದ ನಿತಿನ್, ದಿನೇಶ್ ಹಾಗೂ ಚಾಲಕರಾದ ಗೋಪಾಲ ಮತ್ತು ಶೇಖರ ಶೇರುಗಾರ್ ಅವರ ವಿಶೇಷ ತಂಡ ಕಾರ್ಯಚರಣೆಯಲ್ಲಿದ್ದರು.
Comments are closed.