ಕರಾವಳಿ

ಕೊರಗ ಜನಪದ ಜ್ಞಾನದ ದಾಖಲೀಖರಣ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರ | ಸಾಧಕರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಕೊರಗ ಸಮುದಾಯದ ಹಿರಿಯರಲ್ಲಿರುವ ಅನುಭವ ಯಾವ ಡಿಗ್ರಿಗೂ ಕಡಿಮೆಯಿಲ್ಲ. ಬುಟ್ಟಿ ಮಾಡುವ ಕೊರಗ ಸಮುದಾಯದ ಮಹಿಳೆಗೆ ಇರುವ ಕೌಶಲ್ಯ ಮತ್ತು ಅದರ ಕುರಿತು ಇರುವ ಜ್ಞಾನ ವಿಶಿಷ್ಟವಾದುದು. ಎಷ್ಟೇ ಶಿಕ್ಷಣ ಪಡೆದರು ಸಹ ಯಾರು ಕೂಡ ಯಾವುದೇ ಭಾಷೆಯ ಸಂಪೂರ್ಣ ವಿದ್ವಾಂಸರಲ್ಲ. ಎಲ್ಲರೂ ಸಹ ಕಲಿಕೆಯ ಹಾದಿಯಲ್ಲಿ ಇರುವವರೆ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಲು ಒಂದು ಜೀವಮಾನ ಕಾಲ ಸಾಲುವುದಿಲ್ಲ. ನಾವು ಕಲಿತ ಕಲಿತ ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಲು ಸಾಧ್ಯವಾಗಬೇಕು. ಕೊರಗ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಲ್ಲಿ ಕಲಿಕೆ ಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಸಾಯಿಗೀತಾ ಹೇಳಿದರು.

ನಿಟ್ಟೆ ವಿಶ್ವ ವಿದ್ಯಾನಿಲಯ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ಮತ್ತು ಕೊರಗ ಸಂಘಟನೆಗಳ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಹಾಡಿಮನೆಯಲ್ಲಿ ಜ.23ರಂದು ನಡೆದ ‘ಕೊರಗ ಜನಪದ ಜ್ಞಾನದ ದಾಖಲೀಖರಣ’ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೊರಗ ಸಮುದಾಯದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ವಿಚಾರ ಮಂಡಿಸಿದರು.

ಕೊರಗ ಸಮುದಾಯದವರು ಹಿಂಜರಿಕೆಯಿಂದ ನಿಲ್ಲಬಾರದು ಮುಜುಗರ ಎನ್ನುವುದು ಇರಬಾರದು ನಮ್ಮ ಅನುಭವಗಳಿಗೆ ನಾವೇ ನೇತೃತ್ವ ವಹಿಸಿದವರು. ಸಮುದಾಯ ಮತ್ತು ಕಲಿಕೆ ನಡುವೆ ಅಂತರ ಹೆಚ್ಚು ಮಾಡಲಾಗುತ್ತಿದ್ದು ಸಮುದಾಯ ಮತ್ತು ಕಲಿಕೆ ಎರಡು ಜೊತೆ ಜೊತೆಗೆ ಸಾಗಬೇಕು. ನಮ್ಮ ಕಸುಬುಗಳು ಮತ್ತು ಕಲಿಕೆ ಜೊತೆ ಜೊತೆಗೆ ಸಾಗಬೇಕು. ಹೀಗಾಗಿ ಭಾಷೆ ಉಳಿಸಬೇಕು ಎಂದಾದರೆ ದಾಖಲೀಖರಣದ ಜೊತೆಗೆ ಮಕ್ಕಳಲ್ಲಿ ಭಾಷೆ ಬೆಳಸಬೇಕು. ಕೊರಗ ಭಾಷೆಯ ಪ್ರತಿ ಶಬ್ದಗಳನ್ನು ಸಹ ದಾಖಲಿಸುವ ಗುರಿಯಿದೆ. ಅದಕ್ಕಾಗಿ ಕೊರಗ ಸಮುದಾಯದ ಹಿರಿಯರು ಮಾಹಿತಿ ನೀಡಲು ಸಹಕರಿಸಬೇಕು. ಹಾಗೆ ಸಮುದಾಯದ ವಿದ್ಯಾರ್ಥಿಗಳು, ಯುವಜನರು ಸಹ ದಾಖಲೀಖರಣಕ್ಕೆ ಬರಹ ರೂಪದಲ್ಲಿ, ಆಡಿಯೋ ಮತ್ತು ವಿಡಿಯೋ ರೆಕಾರ್ಡ್ ಮಾಡಲು ಸಹಾಕಾರ ನೀಡಬೇಕಿದೆ ಎಂದು ತಿಳಿಸಿದರು.

ಸಮುದಾಯದ ಹಿರಿಯ ಮಹಿಳೆ ಕಾಳು ಕೊರಗ ಕಾರ್ಯಾಗಾರ ಉದ್ಘಾಟಿಸಿದರು.

ಸನ್ಮಾನ: ಕೊರಗ ಸಮುದಾಯದ ಕಲಾವಿದರು, ಗುರಿಕಾರರು, ಕೃಷಿ ಕ್ಷೇತ್ರದಲ್ಲಿ ತೊಡಗಿರುವ, ಸೃಜನಶೀಲ ಕುಲಕಸುಬು ನಿರತರನ್ನು ಸನ್ಮಾನಿಸಲಾಯಿತು. ಕುಷ್ಟು ಕೊರಗ ಯರುಕೊಣೆ, ಶಂಕರ ಬಾರಂದಾಡಿ, ಕಾಳು ಆಲೂರು, ಕರಿಯಮ್ಮ ಆಲೂರು, ಕೃಷ್ಣ ತೆಂಕಬೈಲು, ಮಾಸ್ತಿ ಹೆಮ್ಮಂಜೆ, ಕೊರಗ ನಾರ್ಕಳಿ, ರಾಮ ವಂಡ್ಸೆ, ಈರ ದೀಟಿ, ಹೊನ್ನಮ್ಮ ಕೊಣ್ಕಿ, ಐತಾ ನಂದ್ರೋಳಿ, ರಾಮ ಹೆರೂರು, ಸಂದೀಪ ಮಾರಣಕಟ್ಟೆ ಇವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಲೂರು ಘಟಕದ ಅಧ್ಯಕ್ಷ ಗಣೇಶ ಆಲೂರು ಅಧ್ಯಕ್ಷತೆ ವಹಿಸಿದ್ದರು. ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ರವಿ ಶೆಟ್ಟಿ, ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಕೊರಗ ಸಮುದಾಯ ಸಾಹಿತಿ ಬಾಬು ಪಾಂಗಳ, ಉಡುಪಿ ಜಿಲ್ಲಾ ಕೊರಗ ಸಂಘದ ಜಿಲ್ಲಾ ಅಧ್ಯಕ್ಷೆ ಗೌರಿ ಕೆಂಜೂರು, ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಜಿಲ್ಲಾ ಅಧ್ಯಕ್ಷ ಸುಂದರ ಕೊರಗ ಉಪಸ್ಥಿತರಿದ್ದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಶ್ರೀಧರ ನಾಡ ಪ್ರಾಸ್ತಾವನೆಗೈದರು. ನಾಗರಾಜ್ ನಂದ್ರೋಳಿ ಸ್ವಾಗತಿಸಿದರು. ರೇವತಿ ಆಲೂರು ಕಾರ್ಯಕ್ರಮ ನಿರೂಪಿಸಿ, ಸುರೇಶ್ ಹೇರೂರು ವಂದಿಸಿದರು.

ಕೊರಗ ಭಾಷೆ‌ ದಾಖಲೀಕರಣದ ಗುರಿ:
ಕೊರಗ ಭಾಷೆಯ ದಾಖಲೀಖರಣ ಮಾಡಲು ನಾವು ಹಿಂದೆ ಕ್ಷೇತ್ರ ಕಾರ್ಯಕ್ಕೆ ಹೋದಾಗ ‘ನೀವು ಕೆಲ ವರ್ಷದ ಹಿಂದೆ ಈ ಕೆಲಸಕ್ಕೆ ಬರಬೇಕಿತ್ತು. ಹಿಂದಿನವರಿಗೆ ನಮಗಿಂತ ಹೆಚ್ಚು ತಿಳಿದಿತ್ತು’ ಎಂಬ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಮುದಾಯದ ಪೂರ್ವಿಕರು ನಮ್ಮಿಂದ ದೂರ ಆದ ಹಾಗೆ ಒಂದಿಷ್ಟು ಜ್ಞಾನ ಕಳೆದು ಹೋಗುತ್ತದೆ. ಇತ್ತೀಚೆಗೆ ಒಂದು ಭಾಷೆಯ ಮಾತನಾಡುವ ಉಳಿದಿರುವ ಒಬ್ಬನೇ ಒಬ್ಬ ವ್ಯಕ್ತಿಯು ತೀರಿ ಕೊಂಡಾಗ ಆ ಭಾಷೆ ಅಳಿವಾಯಿತು ಎನ್ನಲಾಗುತ್ತದೆ. ಉಳಿದಿರುವ ಒಬ್ಬ ವ್ಯಕ್ತಿಗೆ ಸಂವಹನ ನಡೆಸಲು ಯಾರಿಲ್ಲ. ಆ ವ್ಯಕ್ತಿಗೆ ಹೊರತು ಬೇರೆ ಯಾರಿಗೂ ಆ ಭಾಷೆ ಬರುತ್ತಿರಲಿಲ್ಲವಾದ್ದರಿಂದ ಭಾಷೆಯು ಸತ್ತಿದೆ. ಇಂದು ಕೃಷಿ ಕ್ಷೇತ್ರದಲ್ಲಿ ಸಹ ಗಣನೀಯ ಬದಲಾವಣೆ ಆಗಿದೆ. ಆ ಕೃಷಿಯ ಜೊತೆಗಿನ ಶಬ್ದಗಳ ಬಳಕೆ ನಿಂತು ಹೋಗುತ್ತದೆ. ಅದಕ್ಕಾಗಿ ಭಾಷೆಯ ದಾಖಲಿಖೀರಣ ಎನ್ನುವುದು ಮಹತ್ವದ್ದು. ಕೊರಗ ಸಮುದಾಯದಲ್ಲಿ ಕಪ್ಪಡ ಕೊರಗ, ಸೊಪ್ಪು ಕೊರಗ, ತೊಪ್ಪು ಕೊರಗ, ಕುಂಟ್ಟು ಕೊರಗ ಎನ್ನುವ ನಾಲ್ಕು ಒಳ ಪಂಗಡಗಳು ಇದೆ. ಈ ನಾಲ್ಕು ಒಳಪಂಗಡಗಳ ಭಾಷೆ, ಜ್ಞಾನ ಎಲ್ಲಾವು ಬೇರೆ ಬೇರೆ ಆಗಿವೆ. ಭಾಷೆ ತಿಳಿದ ಸಮುದಾಯದವರೆ ದಾಖಲಿಖೀರಣ ಮಾಡುವ ಕೆಲಸವನ್ನು ಗೌರಿ ಕೆಂಜೂರು, ಬಾಬು ಪಾಂಗಾಳ, ಶ್ರೀಧರ ನಾಡ ಅವರು ನಡೆಸುತ್ತಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
– ಡಾ.ಸಾಯಿಗೀತಾ (ನಿಟ್ಟೆ ವಿಶ್ವ ವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರು)

Comments are closed.